LATEST NEWS
ಲೇಡಿಸ್ ಬಾರ್, ಮಸಾಜ್ ಸೆಂಟರ್, ಪಬ್ ಗಳಿಗೆ ಅನುಮತಿ ವಿರುದ್ದ ವಿಎಚ್ ಪಿ ಎಚ್ಚರಿಕೆ

ಲೇಡಿಸ್ ಬಾರ್, ಮಸಾಜ್ ಸೆಂಟರ್, ಪಬ್ ಗಳಿಗೆ ಅನುಮತಿ ವಿರುದ್ದ ವಿಎಚ್ ಪಿ ಎಚ್ಚರಿಕೆ
ಮಂಗಳೂರು ಜೂನ್ 19: ಮಂಗಳೂರು ನಗರದಲ್ಲಿ ತಲೆ ಎತ್ತಿರುವ ಲೈವ್ ಬ್ಯಾಂಡ್, ಲೇಡಿಸ್ ಬಾರ್, ಮಸಾಜ್ ಸೆಂಟರ್ ಹಾಗೂ ಪಬ್ ಗಳಿಗೆ ಕಡಿವಾಣ ಹಾಕದಿದ್ದರೆ ಪಬ್ ದಾಳಿ ರೀತಿಯ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಇತ್ತೀಚೆಗೆ ನಗರದ ಕೆಲವು ಕಡೆ ಲೈವ್ ಬ್ಯಾಂಡ್ ,ಲೇಡಿಸ್ ಬಾರ್ ಗಳು ತಲೆ ಎತ್ತುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಹೇಳಿದರು. ಬಜರಂಗದಳ ಸಂಗೀತಕ್ಕೆ ವಿರೋಧಿಗಳಲ್ಲ ಆದರೆ ಸಂಗೀತದ ಹೆಸರಿನಲ್ಲಿ ನಡೆಯವ ಅನೈತಿಕ ಚಟುವಟಿಕೆಗಳಿಗೆ ವಿರೋಧ ವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್ ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ನಗರದ ಲಾಲ್ ಬಾಗ್, ಹಂಪನಕಟ್ಟೆ, ಪಂಪ್ ವೆಲ್ ಮತ್ತಿತರ ಕಡೆಗಳಲ್ಲಿ ಲೇಡಿಸ್ ಬಾರ್, ಲೈವ್ ಬ್ಯಾಂಡ್, ಪಬ್, ಮಸಾಜ್ ಸೆಂಟರ್ ಗಳಿಗೆ ಅನುಮತಿ ನೀಡಲಾಗಿದ್ದು, ಇದರಿಂದಾಗಿ ಯುವ ಜನತೆ ದಾರಿ ತಪ್ಪುವ ಸಾಧ್ಯತೆ ಇದೆ ಎಂದು ಹೇಳಿದರು. ಅಲ್ಲದೆ ಇಂತಹ ಸೆಂಟರ್ ಗಳಲ್ಲಿ ವೇಶ್ಯಾವಾಟಿಕೆ ನಡೆಯುವ ಸಾಧ್ಯತೆ ಇದೆ, ಹೀಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇದರ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದ ಅವರು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.