ವಿಎಚ್ ಪಿ ಮುಖಂಡ ಪ್ರವೀಣ್ ಬಾಯ್ ತೋಗಾಡಿಯಾ ಮಿಸ್ಸಿಂಗ್
ಅಹಮದಾಬಾದ್ ಜನವರಿ 15: ವಿಶ್ವಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಬಾಯ್ ತೋಗಾಡಿಯಾ ಕಾಣೆಯಾದ ಬಗ್ಗೆ ವರದಿಯಾಗಿದ್ದು, ಅಹಮದಾಬಾದ್ ಪೊಲೀಸರು 4 ತಂಡಗಳನ್ನು ರಚಿಸಿ ಪ್ರವೀಣ್ ಬಾಯ್ ತೊಗಾಡಿಯಾ ಅವರ ಇರುವಿಕೆ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ಪ್ರವೀಣ್ ಬಾಯ್ ತೊಗಾಡಿಯಾ ಇಂದು ಬೆಳಿಗ್ಗೆ 10.45 ಕ್ಕೆ ವಿಎಚ್ ಪಿ ಕಚೇರಿಯಿಂದ ಆಟೋ ರಿಕ್ಷಾದಲ್ಲಿ ತೆರಳಿದ ನಂತರ ಅವರು ನಾಪತ್ತೆಯಾಗಿದ್ದಾರೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.
ವಿಎಚ್ ಪಿ ಕಾರ್ಯಕರ್ತರ ಪ್ರಕಾರ ಪ್ರವೀಣ್ ಬಾಯ್ ತೋಗಾಡಿಯಾ ಅವರನ್ನು ರಾಜಸ್ಥಾನ ಪೊಲೀಸರು ಹಳೆಯ ಕೇಸ್ ಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ರಾಜಸ್ಥಾನ ಪೊಲೀಸರು ತೋಗಾಡಿಯಾ ಅವರ ಬಂಧನವನ್ನು ಅಲ್ಲಗೆಳೆದಿದ್ದಾರೆ.
ಪ್ರವೀಣ್ ಬಾಯ್ ತೊಗಾಡಿಯಾ ಅವರಿಗೆ ಝೆಡ್ ಪ್ಲಸ್ ಸೆಕ್ಯುರಿಟಿ ಇದ್ದು, ಆದರೆ ಇಂದು ಬೆಳಿಗ್ಗೆ ವಿಎಚ್ ಪಿ ಕಚೇರಿಯಿಂದ ಹೊರಡುವಾಗ ಯಾವುದೇ ಸೆಕ್ಯುರಿಟಿ ಅವರ ಜೊತೆ ತೆರಳಿಲ್ಲ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.