LATEST NEWS
ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾಗೆ ಸುಪ್ರೀಂಕೋರ್ಟ್ ತರಾಟೆ – ಮನಸ್ಸಿನ ಕೊಳಕನ್ನು YouTubeನಲ್ಲಿ ವಾಂತಿ ಮಾಡಿದ್ದಾನೆ

ನವದೆಹಲಿ ಫೆಬ್ರವರಿ 18: ಯುಟ್ಯೂಬ್ ನ ಶೋ ಒಂದರಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದ ಖ್ಯಾತ ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾ ಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜ ನಾಚಿಕೆ ಪಡುವಂತೆ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ಅಶ್ಲೀಲ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಬಂಧನಕ್ಕೆ ಸಂಬಂಧಿಸಿದ ಅರ್ಜಿಯನ್ನು ಇಂದು ಆಲಿಸಿದ ಸುಪ್ರೀಂಕೋರ್ಟ್, ರಣವೀರ್ ಮೇಲೆ ಹೆಚ್ಚುವರಿ ಎಫ್‌ಐಆರ್‌ಗಳನ್ನು ದಾಖಲಿಸದಂತೆ ನಿರ್ದೇಶನ ನೀಡಿದೆ. ಇದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸದ್ಯ ಪಾರಾಗಿದ್ದಾನೆ. ಆದರೆ, ರಣವೀರ್‌ನ ಅಶ್ಲೀಲ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದೆ.

ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಏನು ಬೇಕಾದರೂ ಮಾತನಾಡಲು ಯಾರಿಗೂ ಪರವಾನಿಗಿ ಇಲ್ಲ ಎಂದಿತು. ನೀವು ಹೇಳಿರುವುದು ಆಶ್ಲೀಲವಲ್ಲದೇ ಮತ್ತೇನು? ನಾವು ನಿಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ಏಕೆ ರದ್ದುಗೊಳಿಸಬೇಕು ಎಂದು ಪ್ರಶ್ನಿಸಿತು. ಅಲ್ಲದೆ ಇಲಾಹಾಬಾದಿಯಾ ಅವರ ಇತರ ಕಾಮೆಂಟ್‌ಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದರೆ ಅವರನ್ನು ಬಂಧಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತವನ್ನು ತೊರೆಯುವಂತಿಲ್ಲ ಎಂದು ಆದೇಶಿಸಿ, ಅವರ ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆಯುವಂತೆ ಥಾಣೆ ಪೊಲೀಸರಿಗೆ ಸೂಚಿಸಿತು. ಇದರ ಜತೆಗೆ ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾದ ಪ್ರಕರಣದ ವಿಚಾರಣೆಗೆ ಸಹಕರಿಸುವಂತೆ ರಣವೀರ್‌ಗೆ ಕೋರ್ಟ್ ಸೂಚಿಸಿದೆ.