LATEST NEWS
ಮಂಗಳೂರು – ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಬಾಲಕನ ಜೀವ ಉಳಿಸಿದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯರು
ಮಂಗಳೂರು ಫೆಬ್ರವರಿ 09: ಸರಕಾರಿ ವೈದ್ಯರೂ ಕೂಡ ಅತ್ಯಂತ ಕ್ಷಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಮಾಡಬಲ್ಲರು ಎನ್ನುವುದನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರು ತೋರಿಸಿಕೊಟ್ಟಿದ್ದಾರೆ.
ಆಕಸ್ಮಿಕವಾಗಿ ಬಿದ್ದ ಬಾಲಕನಿಗೆ ಕುತ್ತಿಗೆಯ ಮೂಲಕ ಎದೆಯ ತನಕ ತೆಂಗಿನಗರಿಯ ಕೊಂಬೆಯ ಭಾಗವೊಂದು ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯ ಒಳಗಡೆಗೆ ಹೊಕ್ಕಿತ್ತು. ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹುಡುಗನಿಗೆ ಪ್ರಾಥಮಿಕ ಚಿಕಿತ್ಸೆಯ ಬಳಿಕ ಕೂಡಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಹೊಕ್ಕಿದ್ದ ತೆಂಗಿನಗರಿಯನ್ನು ಸುದೀರ್ಘ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಮಂಗಳೂರು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಬಾಲಕನ ಜೀವ ಉಳಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಅಸ್ಸಾಂ ರಾಜ್ಯದ ಗುವಾಹಟಿ ಮೂಲದವನಾದ ಬಾಲಕ ಕಮಲ್ ಹುಸೇನ್(12) ಎಂಬಾತನ ಪೋಷಕರು ಕೊಡಗು ಜಿಲ್ಲೆಯ ಮಡಿಕೇರಿಯ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಸಂಜೆಯ ಬಾಲಕ ಮನೆಯ ಬಳಿ ಆಟವಾಡುತ್ತಿದ್ದಾಗ ಹತ್ತಿರವೇ ಇದ್ದ ತೆಂಗಿನಮರದ ಗರಿಯೊಂದು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು. ಈ ಪ್ರಕರಣವನ್ನು ಕೂಡಲೇ ಗಂಭೀರವಾಗಿ ಪರಿಗಣಿಸಿದ ವೆನ್ಲಾಕ್ ಆಸ್ಪತ್ರೆಯ ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಕರಾದ ವೈದ್ಯರಾದ ಡಾ. ಸುರೇಶ್ ಪೈ ನೇತೃತ್ವದ ತಂಡವು, ತಮ್ಮ ವೈದ್ಯಕೀಯ ಕೌಶಲ್ಯದ ಮೂಲಕ 12 ವರ್ಷದ ಹುಡುಗನ ಎದೆಗೆ ಹೊಕ್ಕಿದ್ದ ತೆಂಗಿನ ಮರದ ತುಂಡಿನೊಂದಿಗೆ ಎದೆಗೆ ಹೊಕ್ಕಿದ್ದ ಸ್ಟೀಲ್ ಚೈನ್ ನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಮಧ್ಯರಾತ್ರಿ 1.30 ರಿಂದ 3.30 ರವರೆಗೆ ಶಸ್ತ್ರಚಿಕಿತ್ಸೆ ನಡೆಯಿತು. ಶಸ್ತ್ರಚಿಕಿತ್ಸೆ ಸಕ್ಸಸ್ ಆಗಿದ್ದು ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸರಕಾರಿ ಆಸ್ಪತ್ರೆಯಲ್ಲೂ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಕೂಡ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.