LATEST NEWS
ಮಂಗಳೂರು ದಸರಾ ಕುರಿತಂತೆ ಶಾಸಕ ವೇದವ್ಯಾಸ ಕಾಮತ್ ಸಭೆ…!!
ಮಂಗಳೂರು ಸೆಪ್ಟೆಂಬರ್ 25: ಮಂಗಳೂರು ದಸರಾ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದ ಸಭೆಯು ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಕುರಿತು ಮಾತನಾಡಿರುವ ಶಾಸಕ ಕಾಮತ್, ಮಂಗಳೂರು ದಸರಾ ಸೇರಿದಂತೆ, ನಗರದೆಲ್ಲೆಡೆ ಆಚರಿಸಲ್ಪಡುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಸಹಕಾರ ನೀಡುವ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ವಿದ್ಯುತ್ ದೀಪಾಲಂಕಾರ, ಕಸ ವಿಲೇವಾರಿ, ಶೋಭಾಯಾತ್ರೆ ಸಾಗುವ ರಸ್ತೆ, ದೇವಸ್ಥಾನಗಳ ಪರಿಸರದಲ್ಲಿ ಸ್ವಚ್ಛತೆ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಗೆ ತೊಡಕಾಗದಂತೆ ಕಾರ್ಯ ನಿರ್ವಹಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕೂಡ ಹಬ್ಬದ ದೃಷ್ಟಿಯಿಂದ ಕಾರ್ಯ ಪ್ರವೃತರಾಗಬೇಕು. ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರವಾಸಿಗರು, ಭಕ್ತರಿಗೆ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶೋಭಾಯಾತ್ರೆ ಸಾಗುವ ಕಡೆಗಳಲ್ಲಿ ಅಪಾಯಕಾರಿ ಹಂತದಲ್ಲಿರುವ ಮರದ ರೆಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆ ವಿಭಜಕಗಳಿಗೆ ಪೈಂಟಿಂಗ್, ಅಲ್ಲಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ, ಆರೋಗ್ಯ ಸಿಬ್ಬಂಧಿಗಳ ನೇಮಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಕಾಮತ್ ಸೂಚನೆ ನೀಡಿದ್ದಾರೆ.