LATEST NEWS
ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ಸ್ಕಾಡ್ ರಚಿಸಿ ಮಂಗಳೂರಿನ ಹೆಸರು ಕೆಡಿಸುವ ಕೆಲಸ ಮಾಡುತ್ತಿದೆ -ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಜೂನ್ 18: ಫ್ರೀ ಘೋಷಣೆಗಳ ಮೂಲಕ ಆಡಳಿತಕ್ಕೆ ಬಂದ ಕಾಂಗ್ರೇಸ್ ಸರಕಾರ ಈಗ ಷರತ್ತುಗಳನ್ನು ವಿಧಿಸಿ ಜನರನ್ನು ವಂಚಿಸುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಉಚಿತ ಭಾಗ್ಯಗಳ ಗ್ಯಾರೆಂಟಿ ಕಾರ್ಡ್ ಹಿಡಿದು ಮತಯಾಚಿಸಿದ್ದ ಕಾಂಗ್ರೇಸ್ ಆಡಳಿತಕ್ಕೇರಿದ ಬಳಿಕ ದರಯೇರಿಕೆಯ ಮೂಲಕ ಜನರನ್ನು ಷೋಷಿಸುತ್ತಿದೆ. ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದ ಕಾಂಗ್ರೇಸ್ ವಿವಿಧ ಷರತ್ತುಗಳನ್ನು ವಿಧಿಸುವುದಲ್ಲದೆ ಪ್ರತಿ ಯುನಿಟ್ ವಿದ್ಯುತಿನ ಬೆಲೆಯನ್ನು ಏಕಾಏಕಿ ಏರಿಸುವ ಮೂಲಕ ಜನ ವಿರೋಧಿ ನೀತಿಯನ್ನು ಅನುಸರಿಸರಿಸುತ್ತಿದೆ ಎಂದು ಹೇಳಿದರು.
ಪ್ರತಿ ಮನೆಗೂ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಪೂರೈಸುವುದಾಗಿ ಗ್ಯಾರಂಟಿ ನೀಡಿದ್ದ ಕಾಂಗ್ರೇಸ್ ಈಗ ಕೇಂದ್ರ ಸರಕಾರವನ್ನು ದೂಷಿಸುತ್ತಾ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಪಡಿತರ ಅಂಗಡಿಗಳಲ್ಲಿ ಕೇಂದ್ರ ಸರಕಾರವು ಪ್ರತಿ ತಿಂಗಳು 5 ಕೆ.ಜಿ ಅಕ್ಕಿಯನ್ನು ವಿತರಿಸುತಿದೆ. ಕಾಂಗ್ರೇಸ್ ಜನರಿಗೆ ನೀಡಿದ ಗ್ಯಾರೆಂಟಿಯಂತೆ ಹೆಚ್ಚುವರಿ 10 ಕೆ.ಜಿ ಅಕ್ಕಿ ಸೇರಿಸಿ ಒಟ್ಟು 15 ಕೆ.ಜಿ ಅಕ್ಕಿಯನ್ನು ನೀಡಬೇಕು. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದ ಕಾಂಗ್ರೇಸ್ ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್ ಪಾಸ್ ನೀಡಲಿ. ಒಂದು ಬಸ್ಸಿನಲ್ಲಿ ಕೇವಲ 25 ಮಹಿಳೆಯರಿಗಷ್ಟೇ ಉಚಿತ ಎನ್ನುವ ಮೂಲಕ ಮಹಿಳೆಯರಿಗೆ ವಂಚಿಸುತ್ತಿದೆ ಎಂದು ಹೇಳಿದರು.
ನಿರುದ್ಯೋಗಿಗಳಿಗೆ ಹಾಗೂ ಮನೆಯ ಯಜಮಾನಿಗೆ ನೀಡುವ ಭತ್ಯೆ ಹಣವನ್ನು ತಕ್ಷಣದಿಂದಲೇ ಜಾರಿಗೊಳಿಸಲಿ. ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಗೊಳಿಸಿದ್ದ 20 ಸಾವಿರ ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿಯಲಾಗಿದೆ. 40% ಎನ್ನುತ್ತಿದ್ದ ಕಾಂಗ್ರೇಸ್ 80%. ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧೀನದ ವಿದ್ಯಾಸಂಸ್ಥೆಗಳಿಗೆ ನೀಡಿದ ಜಾಗವನ್ನು ಮರಳಿ ಪಡೆದಿದೆ. ಆರೆಸ್ಸೆಸ್ ಹಾಗೂ ಬಜರಂಗದಳ ನಿಷೇಧಿಸುವ ಕುರಿತು ಪದೇ ಪದೇ ಮಾತನಾಡುವ ಕಾಂಗ್ರೇಸ್ ನಾಯಕರು ಈ ಹಿಂದೆ ನಿಷೇಧಿತ ಉಗ್ರ ಸಂಘಟನೆ ಪಿಎಫ್ಐ ಮೇಲಿನ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟು ರಾಷ್ಟ್ರ ವಿದ್ರೋಹಿಗಳಿಗೆ ಸಹಕಾರ ನೀಡಿರುವುದು ಜಗಜ್ಜಾಹೀರಾಗಿದೆ ಎಂದರು.
ರಾಷ್ಟ್ರೀಯ ವಿಚಾರಧಾರೆಗಳಿರುವ ಪಠ್ಯಗಳನ್ನು ಕೈಬಿಟ್ಟು ಸರಕಾರ ಜನತೆಗೆ ಯಾವ ಸಂದೇಶ ನೀಡುತ್ತಿದೆ. ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಅವರ ಕುರಿತು ಬರೆದಿರುವ ಪಠ್ಯವನ್ನು ಕೈಬಿಟ್ಟು ದೇಶಕ್ಕಾಗಿ ಬಲಿದಾನಗೈದ ಮಹಾನ್ ವೀರರನ್ನು ಅವಮಾನಿಸಿದೆ. ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ಸ್ಕಾಡ್ ರಚಿಸಿ ಮಂಗಳೂರಿನ ಹೆಸರು ಕೆಡಿಸುವ ಕೆಲಸ ಮಾಡುತ್ತಿದೆ. ಬ್ರಾಂಡ್ ಮಂಗಳೂರು ಪರಿಕಲ್ಪನೆಯನ್ನು ವಿರೂಪಗೊಳಿಸಿ ಮಂಗಳೂರು ಕೋಮುಸೂಕ್ಷ್ಮ ಪ್ರದೇಶವಾಗಿ ಅಪಪ್ರಚಾರ ಮಾಡುವ ಮೂಲಕ ಉದ್ಯಮ ಬೆಳವಣಿಗೆಗೆ ಕೊಡಲಿಯೇಟು ಹಾಕುತ್ತಿದೆ ಎಂದರು.