ವಾಷಿಂಗ್ಟನ್: ಇರಾನ್ ಮನವಿಯ ಮೇರೆಗೆ ಅಲ್ಲಿನ ಸೇನಾ ಕಾರ್ಯಾಚರಣೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

‘ಏರ್ ಫೋರ್ಸ್ ಒನ್’ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಉಭಯ ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬೆಳವಣಿಗೆಗಳ ಕುರಿತು ಮಾಹಿತಿ ಹಂಚಿಕೊಂಡರು. “ದಯವಿಟ್ಟು ದಾಳಿ ನಿಲ್ಲಿಸಿ, ನಾವಿಬ್ಬರೂ ಭೇಟಿಯಾಗಿ ಮಾತುಕತೆ ನಡೆಸೋಣ ಎಂದು ಇರಾನ್ ಅತ್ಯಂತ ವಿನಮ್ರವಾಗಿ ಕೋರಿದೆ. ಹೀಗಾಗಿ ಸದ್ಯಕ್ಕೆ ದಾಳಿ ತಡೆದು ಮಾತುಕತೆಗೆ ಮುಂದಾಗಿದ್ದೇವೆ. ಹೊಸ ಒಪ್ಪಂದ ಸಾಧ್ಯವಾಗದಿದ್ದರೆ ಮತ್ತೆ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ,” ಎಂದು ಎಚ್ಚರಿಸಿದ್ದಾರೆ.
ಇರಾನ್ ಜತೆ ನೇರವಾಗಿ ಮತ್ತು ಮಧ್ಯಸ್ಥಿಕೆದಾರರ ಮೂಲಕವೂ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆ ಸಕಾರಾತ್ಮಕವಾಗಿ ನಡೆಯುತ್ತಿದೆ. ಅಮೆರಿಕ ನಡೆಸಿದ ತೀವ್ರ ದಾಳಿಯ ಪರಿಣಾಮವಾಗಿಯೇ ಇರಾನ್ ಇವತ್ತು ಮಾತುಕತೆಗೆ ಮುಂದೆ ಬಂದಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಯುದ್ಧ ಮುಂದುವರಿದರೆ ‘ಪೇಟ್ರಿಯಾಟ್’ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಬಹುದು ಎಂದು ಸೇನಾಧಿಕಾರಿಗಳು ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಎಚ್ಚರಿಸಿದ್ದರು ಎನ್ನಲಾದ ವರದಿಗಳನ್ನು ಪ್ರಸ್ತಾಪಿಸಿದ ಟ್ರಂಪ್, ಯುದ್ಧ ಸಾಮಗ್ರಿಗಳ ಕೊರತೆಯಿದೆ ಎಂಬ ಮಾತುಗಳನ್ನು ತಳ್ಳಿಹಾಕಿದ್ದಾರೆ.