DAKSHINA KANNADA
ಉಪ್ಪಿನಂಗಡಿ – ಹಾಸಿಗೆಯಲ್ಲಿ ಕುಳಿತಲ್ಲೇ ಹೃದಯಾಘಾತದಿಂದ ಮೃತಪಟ್ಟ ಯುವಕ

ಉಪ್ಪಿನಂಗಡಿ ಫೆಬ್ರವರಿ 23: ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ 34 ನೆಕ್ಕಿಲಾಡಿಯ ಕೊಳಕ್ಕೆ ಎಂಬಲ್ಲಿ ನಡೆದಿದೆ.
ಕೊಳಕ್ಕೆ ನಿವಾಸಿ ದಿ. ಕೃಷ್ಣಪ್ಪ ನಾಯ್ಕ ಎಂಬವರ ಪುತ್ರ ಕೇಶವ ಕೆ. (28) ಮೃತ ವ್ಯಕ್ತಿ. ಇಲ್ಲಿನ ವೈನ್‌ಶಾಪ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಎರಡು ಮೂರು ದಿನಗಳಿಂದ ಜ್ವರವಿದ್ದು, ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದರಿಂದ ಔಷಧಿ ಪಡೆದುಕೊಂಡಿದ್ದರು. ಶುಕ್ರವಾರದಂದು ಅನಾರೋಗ್ಯವೆಂದು ಕೆಲಸಕ್ಕೆ ಗೈರು ಹಾಜರಾಗಿ ಮನೆಯಲ್ಲೇ ಇದ್ದರು. ಶನಿವಾರ ನಸುಕಿನ ಜಾವ ಸುಮಾರು 3 ಗಂಟೆಗೆ ಪತ್ನಿ ಎಚ್ಚರಗೊಂಡು ಇವರನ್ನು ನೋಡಿದಾಗ ಮಲಗಿದ್ದ ಹಾಸಿಗೆಯಲ್ಲಿಯೇ ಎದ್ದು ಕುಳಿತು ಗೋಡೆಗೊರಗಿ ಎದೆಯ ಬಳಿ ತನ್ನ ಕೈಯನ್ನಿಟ್ಟುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ನೆರೆಹೊರೆಯವರ ಸಹಕಾರದೊಂದಿಗೆ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತರಾಗಿದ್ದಾರೆ ಎಂದು ಅಲ್ಲಿ ತಿಳಿಸಲಾಯಿತು.
