KARNATAKA
ಮತ್ತೆ ಕೈಕೊಟ್ಟ ಯುಪಿಐ – 15 ದಿನಗಳಲ್ಲಿ ಮೂರನೇ ಬಾರಿ ಯುಪಿಐ ಡೌನ್

ನವದೆಹಲಿ ಎಪ್ರಿಲ್ 12: ಯುಪಿಐ ಪೇಮೆಂಟ್ ಸೌಲಭ್ಯ ತಾಂತ್ರಿಕ ಸಮಸ್ಯೆಯಿಂದ ಸ್ತಬ್ದವಾಗಿದ್ದು, 15 ದಿನಗಳ ಅಂತರದಲ್ಲಿ ಮೂರನೇ ಬಾರಿ ಯುಪಿಐ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ದೇಶದ ಹಲವು ಭಾಗಗಳಲ್ಲಿ ಶನಿವಾರ ಲಭ್ಯವಾಗದ ಕಾರಣ, ದಿನನಿತ್ಯದ ವಹಿವಾಟಿಗೆ ತೊಡಕಾಯಿತು. ಇದರಿಂದ ವರ್ತಕರು ಮತ್ತು ಗ್ರಾಹಕರು ಪರದಾಡಿದರು.
ಗೂಗಲ್‌ಪೇ, ಫೋನ್‌ಪೇ (Phonepe), ಪೇಟಿಎಂ ಸೇರಿದಂತೆ ಹಲವಾರು ಯುಪಿಐ ಸಂಯೋಜಿತ ಅಪ್ಲಿಕೇಶನ್‌ಗಳಲ್ಲಿ ಏಕಕಾಲಕ್ಕೆ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ಬೇರೆಯವರಿಗೆ ಹಣ ಕಳುಹಿಸಲು ಸಾಧ್ಯವಾಗದೇ ಪರದಾಡಿದ್ದಾರೆ. ಯಾವ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಮಾರ್ಚ್ 26 ಹಾಗೂ ಏ. 2ರಂದು ಇಂಥದ್ದೇ ಸಮಸ್ಯೆ ಸೃಷ್ಟಿಯಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಂತ್ರಣದಲ್ಲಿರುವ ಎನ್‌ಪಿಸಿಐ ನಿರ್ವಹಿಸುವ ತ್ವರಿತ ಪಾವತಿಯ ಯುಪಿಐ ವ್ಯವಸ್ಥೆಯು ಕಳೆದ 15 ದಿನಗಳಲ್ಲಿ ಮೂರನೇಬಾರಿ ಸಮಸ್ಯೆ ಕಾಣಿಸಿಕೊಂಡಿದೆ.

ಯುಪಿಐ ಸಮಸ್ಯೆ ಕುರಿತು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕಿಂತ ನಗದು ವಹಿವಾಟೇ ಮೇಲು ಎಂದು ಬರೆದುಕೊಂಡಿದ್ದಾರೆ.