KARNATAKA
ರೀಲ್ಸ್ ಮಾಡಲು ಐಪೋನ್ ಬೇಕು ಎಂದು ಐಪೋನ್ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಹುಡುಗರು

ಉತ್ತರ ಪ್ರದೇಶ ಜೂನ್ 28: ಒಳ್ಳೆ ಕ್ವಾಲಿಟಿಯ ರೀಲ್ಸ್ ವಿಡಿಯೋ ಮಾಡಲು ಐಪೋನ್ ಅಗತ್ಯ ಎಂದು ಇಬ್ಬರು ಅಪ್ರಾಪ್ತ ಹುಡುಗರು ಐಪೋನ್ ಹೊಂದಿದ್ದ ವ್ಯಕ್ತಿಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಉತ್ತರ ಪ್ರದೇಶದ ಬಹ್ರೇಚ್ನಲ್ಲಿ ವರದಿಯಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಶಬದ್ (19) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ನೆಲೆಸಿದ್ದ ಈತ ಸಂಬಂಧಿ ಮದುವೆ ಹಿನ್ನೆಲೆ ಪೂರ್ವಜರ ಗ್ರಾಮವಾದ ಬಹ್ರೇಚ್ನ ನಾಗೌರ್ಗೆ ಭೇಟಿ ನೀಡಿದ್ದ ಸಂದರ್ಭ ಈ ಘಟನೆ ನಡೆದಿದೆ.

ಜೂನ್ 21ರಂದು ಶಬದ್ ಮೃತದೇಹ ಗ್ರಾಮದ ಹೊರಗಿನ ಹೊರಗಿನ ಬಾವಿ ಹತ್ತಿರ ಪತ್ತೆಯಾಗಿತ್ತು. ಈ ವೇಳೆ ಆತನ ಕುತ್ತಿಗೆ ಸೀಳಿದ್ದು, ತಲೆಯನ್ನು ಜಜ್ಜಿರುವುದು ಕಂಡು ಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ 14 ಮತ್ತು 16 ವರ್ಷದ ಅಪ್ರಾಪ್ತರು ಕೊಲೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ರಾಮಾನಂದ್ ಪ್ರಸಾದ್ ಕುಶ್ವಾಹ ತಿಳಿಸಿದ್ದಾರೆ.
ಜೂನ್ 20ರಂದು ಶಬದ್ ಬಳಿ ಐಫೋನ್ ಇರುವುದನ್ನು ಕಂಡಿದ್ದ ಅಪ್ರಾಪ್ತರು, ಆತನಿಗೆ ರೀಲ್ಸ್ ಮಾಡೋಣ ಎಂದು ರಾತ್ರಿ ಗ್ರಾಮದಲ್ಲಿ ನಿಗದಿ ಪಡಿಸಿದ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದರು. ಅದರಂತೆ ಸಂತ್ರಸ್ತ ಆಗಮಿಸಿದಾಗ ಆತನ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತರು ಚಾಕುವಿನಿಂದ ಆತನ ಕತ್ತು ಸೀಳಿದ್ದು, ತಲೆಯನ್ನು ಇಟ್ಟಿಗೆಯಿಂದ ಜಜ್ಜಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿಗಳಿಂದ ಐಫೋನ್ ಹಾಗೂ ಕೊಲೆಗೆ ಬಳಕೆ ಮಾಡಲಾದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಮತ್ತು ಅವರಿಗೆ ಸಹಾಯ ಮಾಡಿದ ಕುಟುಂಬದ ಇಬ್ಬರು ಸದಸ್ಯರನ್ನು ಬಿಎನ್ಎಸ್ ಸೆಕ್ಷನ್ 103 (1) (ಕೊಲೆ) ಮತ್ತು 238 (ಸಾಕ್ಷ್ಯನಾಶ)ದ ಅಡಿ ಪ್ರಕರಣ ದಾಖಲಾಗಿದೆ.
ಮೃತ ದೇಹ ಪತ್ತೆಯಾಗುತ್ತಿದ್ದಂತೆ ಆರೋಪಿಗಳು ಮತ್ತು ಅವರ ಕುಟುಂಬಸ್ಥರು ಮನೆ ತೊರೆಯಲು ಮುಂದಾಗಿದ್ದರು. ಈ ವೇಳೆ ಅಪ್ರಾಪ್ತರನ್ನು ಸೆರೆ ಹಿಡಿಯಲಾಗಿದೆ. ಬಂಧಿತರಲ್ಲಿ ಒಬ್ಬನಾಗಿರುವ ಅಪ್ರಾಪ್ತನ ಸಂಬಂಧಿ ಕೊಲೆ ಮಾಡಿದ ಶಸ್ತ್ರಾಸ್ತ್ರ ಅಡಗಿಸಿಡಲು ಸಹಾಯ ಮಾಡಿದ್ದು, ಆತನನ್ನು ಬಂಧಿಸಲಾಗಿದ್ದು, ಮತ್ತೊಬ್ಬನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಅಪ್ರಾಪ್ತ ಆರೋಪಿಗಳನ್ನು ಗೊಂಡಾದಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.