LATEST NEWS
ಕಲಿ ಯೋಗೀಶ್ ಸಹಚರ ಎಂಡಿಎಂಎ ಡ್ರಗ್ಸ್ ಜೊತೆ ಸಿಸಿಬಿ ಪೊಲೀಸ್ ಬಲೆಗೆ

ಮಂಗಳೂರು, ಮಾರ್ಚ್ 17: ಹಲವು ಪ್ರಕರಣಗಳಲ್ಲಿ ಬಾಗಿಯಾಗಿ ಪೊಲೀಸರಿಂದ 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಅಬ್ದುಲ್ ಅಶೀರ್ ಯಾನೆ ಸದ್ದು ಯಾನೆ ಸಾದು ಯಾನೆ ಮಾಯ (32) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.
ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ಅಸೀರ್ ಮಾದಕ ವಸ್ತುಗಳೊಂದಿಗೆ ಕಾಸರಗೋಡಿನಿಂದ ಮಂಗಳೂರು ನಗರಕ್ಕೆ ಬಂದು ನಂತೂರು ಪರಿಸರದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿ ವಶದಿಂದ ಸುಮಾರು 5 ಲಕ್ಷ ಮೌಲ್ಯದ 53 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅಸೀರ್ ವಿದೇಶದಲ್ಲಿ ತಲೆಮರೆಸಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿದ್ದು, ಈ ಹಿಂದೆ ಪುತ್ತೂರು ನಗರದಲ್ಲಿ ರಾಜಧಾನಿ ಜ್ಯುವೆಲರ್ಸ್ ಗೆ ಶೂಟೌಟ್ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದವನು ನ್ಯಾಯಾಲಯದಲ್ಲಿ ವಿಚಾರಣೆ ಸಮಯ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಶಾಫೀಕ್ ಕೊಲೆ ಪ್ರಕರಣ, ಪೋಕ್ಸೋ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದ್ದು, ವಾರಂಟ್ ಜಾರಿಯಲ್ಲಿರುತ್ತದೆ.