Connect with us

LATEST NEWS

‘ಸಿಬಿಐ ಸ್ವಯಂಪ್ರೇರಿತ ತನಿಖೆಗೆ ತಡೆ ಅಸಾಂವಿಧಾನಿಕ ನಡೆ’; ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಮಂಗಳೂರು: ಸಿಬಿಐ ಸ್ವಯಂ ಪ್ರೇರಿತ ತನಿಖೆ ನಡೆಸಬಹುದೆಂಬ ಅಧಿಕಾರವನ್ನು ರದ್ದು ಮಾಡುವ ಸಂಪುಟದ ನಿರ್ಣಯದ ಮೂಲಕ ಕರ್ನಾಟಕ ಕಾಂಗ್ರೆಸ್ ಸರಕಾರವು ಸಂವಿಧಾನ ವಿರೋಧಿಯಾಗಿ ವರ್ತಿಸಿದೆ. ಮುಡಾ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳಿಂದಲೇ ಕೂಡಿದ ಸಿದ್ದರಾಮಯ್ಯನವರ ಸರಕಾರವು ಭಯಾತಂಕದಿಂದ ಈ ನಿರ್ಧಾರ ಮಾಡಿದಂತಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ಭಂಗ ತರುತ್ತಿದ್ದಾರೆ, ಕಾಂಗ್ರೆಸ್ಸಿನ ಇತರ ಹಗರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಸಿಬಿಐ ಅನ್ನು ಬ್ಲಾಕ್ ಮಾಡುತ್ತಿರುವ ಹಾಗಿದೆ ಎಂದು ಬಿಜೆಪಿ ಹೇಳಿದೆ.

ಜಿಲ್ಲಾ ಬಿಜೆಪಿ ವಕ್ತಾರರಾದ ರಾಜಗೋಪಾಲ್ ರೈ ಅವರು ಶುಕ್ರವಾರ ಸಂಜೆ ಪಕ್ಷದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಕಾಂಗ್ರೆಸ್ ಸರಕಾರದ ಅಸಾಂವಿಧಾನಿಕ ನಡೆಗಳನ್ನು ಬಲವಾಗಿ ಖಂಡಿಸಿದರು.

ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಬರೆದ ಪತ್ರಕ್ಕೆ ಮುಖ್ಯ ಕಾರ್ಯದರ್ಶಿಗಳು ಉತ್ತರ ಕೊಡಬಾರದು; ಸಂಪುಟದಲ್ಲಿ ಒಪ್ಪಿಗೆ ಕೊಟ್ಟ ವಿಚಾರವನ್ನಷ್ಟೆ ಕಳುಹಿಸಬೇಕೆಂಬ ಇನ್ನೊಂದು ನಿರ್ಣಯವನ್ನೂ ಸಂಪುಟದಲ್ಲಿ ಮಾಡಿದ್ದಾರೆ. ಇದು ಕೂಡ ಸರಕಾರ ಕೈಗೊಂಡ ಆತಂಕದ ನಿರ್ಧಾರವೇ ಆಗಿದೆ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಿದೆ. ಇವನ್ನು ಬಿಜೆಪಿ ಖಂಡಿಸುತ್ತದೆ. ಹಿಂದಿನಂತೆ ಅವಕಾಶ ನೀಡುವಂತೆ ಆಗ್ರಹಿಸುತ್ತೇವೆ.

ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ‘ಕೂಡಲೇ ಯಡಿಯೂರಪ್ಪ ಅವರು ರಾಜೀನಾಮೆ ಕೊಡಬೇಕು, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ” ಎಂಬರ್ಥದ ಮಾತನಾಡಿದ್ದರು. ಈಗ ಸಿದ್ದರಾಮಯ್ಯನವರು ಪಕ್ಷಪಾತದ ತನಿಖೆ ಬಯಸುತ್ತಿರುವ ಕಾರಣ ಬಯಸಿ ರಾಜೀನಾಮೆ ಕೊಡುತ್ತಿಲ್ಲವೇ? ಜೊತೆಗೆ ಸಿಬಿಐ ತನಿಖೆ ನಡೆದರೆ ಇನ್ನಷ್ಟು ಹಗರಣ ಹೊರಬರುವ ಆತಂಕ ಅವರನ್ನು ಕಾಡುತ್ತಿದೆಯೇ? ಎಂದು ರಾಜಗೋಪಾಲ್ ರೈ ಪ್ರಶ್ನಿಸಿದರು.

ಎಸಿಬಿ ದುರ್ಬಳಕೆ, ಲೋಕಾಯುಕ್ತ ದುರ್ಬಲ:

ಹಿಂದಿನ ಅವಧಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಎಸಿಬಿ ದುರುಪಯೋಗ ನಡೆದಿತ್ತು. ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದರು.

ಹಿಂದೆ ಸಿಎಂ ಗಳಾದ ಬಂಗಾರಪ್ಪ, ದೇವರಾಜ ಅರಸ್, ಈಚೆಗೆ ಸಚಿವ ನಾಗೇಂದ್ರರ ರಾಜೀನಾಮೆ ಪಡೆದ ಕಾಂಗ್ರೆಸ್ ಹೈಕಮಾಂಡ್ ಈಗ ಯಾಕೆ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುತ್ತಿಲ್ಲ? ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಮತ್ತು ನ್ಯಾಯಾಂಗಕ್ಕೆ ಇವರು ಗೌರವ ಕೊಡುತ್ತಿಲ್ಲ. ಇವರದು ಈ ವಿಷಯಗಳಲ್ಲಿ ಅನುಷ್ಣಾನಕ್ಕೆ ಬಾರದ ಬಾಯಿಮಾತು ಮಾತ್ರ ಎಂದು ಅವರು ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮುಡಾ ಹಗರಣದ ಕುರಿತು ಬಿಜೆಪಿ ನಿಲುವು ಸ್ಪಷ್ಟವಿದೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. ಒಂದೆಡೆ 14 ನಿವೇಶನಗಳಿದ್ದರೆ, ಇನ್ನೊಂದೆಡೆ 4 ರಿಂದ 5 ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳು ರಿಯಲ್ ಎಸ್ಟೇಟ್, ದಲ್ಲಾಳಿಗಳ ಪಾಲಾಗಿದೆ. ಇದೆಲ್ಲವುಗಳ ಸಮಗ್ರ ತನಿಖೆ ಆಗಬೇಕೆಂದರೆ ಅದು ಸಿಬಿಐನಿಂದ ಮಾತ್ರ ಸಾಧ್ಯ.

ಇದೀಗ ವಿಶೇಷ ನ್ಯಾಯಾಲಯವು ಮುಡಾ ಹಗರಣದ ತನಿಖೆಗೆ ಸೂಚಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು. ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ರೈ ಪ್ರತಿಪಾದಿಸಿದರು.

ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಾರೆ, ಬಿಜೆಪಿ ಸರ್ಕಾರ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎನ್ನುವ ಆರೋಪ ಮಾಡುವ, ಕಾಂಗ್ರೆಸ್ಸಿಗರು ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಲಿ. ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರಗಳು ಸಂವಿಧಾನದ 356 ನೇ ವಿಧಿಯನ್ನು “ದುರುಪಯೋಗ” ಮಾಡುವ ಮೂಲಕ 90 ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿವೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 50 ಬಾರಿ “ದುರುಪಯೋಗ’ಪಡಿಸಿಕೊಂಡರು. ಈ ವಿಚಾರ ಗೊತ್ತಿಲ್ಲವೇ ಕಾಂಗ್ರೆಸ್ಸಿಗರಿಗೆ? ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಸರ್ವಾಧಿಕಾರಿಯಾಗಿ ಮೆರೆದ ಕಾರಣಕ್ಕೆ ಜನ ಕೇಂದ್ರದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಿಲ್ಲ, ಈ ನೆಲದ ಕಾನೂನಿನ ಬಗ್ಗೆ, ನ್ಯಾಯಾಲಯದ ಬಗ್ಗೆ, ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿಗರಿಗೆ ಗೌರವವಿಲ್ಲಾ, ಸಚಿವ ಜಮೀರ್ ಅಹಮದ್ ಮೂಡ ಹಗರಣದ ಬಗೆಗಿನ ನ್ಯಾಯಾಲಯದ ಆದೇಶವನ್ನು ಪೊಲಿಟಿಕಲ್ ಜಡ್ಜ್‌ಮೆಂಟ್ ಎಂದು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ

ಕೇಜ್ರಿವಾಲ್ ಮಾದರಿ ಆಡಳಿತ ಕರ್ನಾಟಕಕ್ಕೆ ಸಲ್ಲದು, ರಿಸೈನ್ ವಿಥ್ ಸ್ಮೈಲ್ ಆಗಿರಬೇಕೇ ಹೊರತು ವರ್ಕ್ ಫ್ರಮ್ ಜೈಲ್ ಆಗಿರಬಾರದು. ಸಿದ್ದರಾಮಯ್ಯ ಕಾನೂನು ಪದವೀಧರರು. ತನ್ನ ಸಹುದ್ಯೋಗಿಗಳಿಗೆ ಕಾನೂನಿನ ಪಾಠಮಾಡೋ ಲಾ ಮಾಸ್ಟರ್, ಮೇಸ್ಟ್ರು ತಪ್ಪು ಮಾಡಬಾರದು. ಹಾಗಾಗಿ ಈ ನೆಲದ ಕಾನೂನಿಗೆ ಗೌರವ ಕೊಟ್ಟು ಕೂಡಲೇ ಸಿದ್ದರಾಮಯ್ಯ ರಾಜನಾಮೆ ನೀಡಿ ಪಕ್ಷಪಾತ ರಹಿತ, ನ್ಯಾಯ ಸಮ್ಮತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜಗೋಪಾಲ್ ರೈ ಆಗ್ರಹಿಸಿದರು.

ನಕಲಿ ಕನ್ನಡ ಪ್ರೇಮ:

ಸಿದ್ದರಾಮಯ್ಯರವರ ನಕಲಿ ಕನ್ನಡ ಪ್ರೇಮದ ಮುಖವಾಡ ಕಳಚಿದೆ. ಕರ್ನಾಟಕದ ಪ್ರಥಮ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ರವರು ವಿಧಾನ ಸಭೆಯಲ್ಲೇ ಶಾಸಕರಿಗೆ ಸ್ವರ, ವ್ಯಂಜನ, ಸಂದಿಗಳ ಪಾಠಮಾಡುವಾಗ, ಕನ್ನಡಿಗರು ಸಿದ್ದರಾಮಯ್ಯ ಒಬ್ಬ ನಂಬರ್ ಒನ್ ಕನ್ನಡಿಗ ಎಂದಿದ್ದರು. ಆದರೆ ರಾಜ್ಯದಲ್ಲಿ ಉರ್ದು ಹೇರಿಕೆ ಮಾಡುವ ಮೂಲಕ, ನೀವು ನಂಬರ್ ಒನ್ ಕನ್ನಡಿಗ ಅಲ್ಲ ನವೆಂಬರ್ ಒನ್ ಕನ್ನಡಿಗ ಎಂದು ಸಾಬೀತು ಮಾಡಿಬಿಟ್ಟಿರಿ, ಜನ ನಿಮ್ಮನ್ನು ಪಕ್ಷಪಾತಿ ಹಾಗೂ ಹಿಂದೂ ವಿರೋದಿ ಎಂದು ಕರೆದರೂ ತಪ್ಪಿಲ್ಲ. ಭಯಭೀತರಾಗಿ ಬದುಕಬೇಕಾದ ಪರಿಸ್ಥಿತಿಯನ್ನು ತಂದಿಟ್ಟಂತಹ ಸಿದ್ದರಾಮಯ್ಯನವರಂತಹ ಮುಖ್ಯಮಂತ್ರಿಗಳು ಬೇಕಿಲ್ಲ. ಸಿದ್ದರಾಮಯಯ್ನವರು ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುವುದಾಗಿ ರೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇನ್ನೊಬ್ಬ ಜಿಲ್ಲಾ ಬಿಜೆಪಿ ವಕ್ತಾರರಾದ ಅರುಣ್ ಶೇಟ್, ಮೋಹನ್ ರಾಜ್ ಕೆ.ಆರ್, ಹಾಗೂ ಡೊಂಬಯ್ಯ ಆರ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *