LATEST NEWS
ಉಳ್ಳಾಲ : ಚಿನ್ನಾಭರಣ ಕಳವು ಪ್ರಕರಣ, ಇಬ್ಬರು ಅಪ್ರಾಪ್ತರು ಸೇರಿ ಐವರ ಬಂಧನ..!
ಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯ ಧರ್ಮನಗರದ ಮನೆಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದ್ದಾರೆ. ಇಬ್ಬರು ಅಪ್ರಾಪ್ತರು ಮತ್ತು ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿ ಬಂಧಿತ ಆರೋಪಿಗಳಾಗಿದ್ದಾರೆ. ಕಳವು ಮಾಡಿದ ಚಿನ್ನಾಭರಣವನ್ನು ಅಂಗಡಿಗಳಿಗೆ ಮಾರಾಟ ಮಾಡಿರುವು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8 ಗಂಟೆಯಿಂದ ಜೂ.16ರ ಮಧ್ಯಾಹ್ನ 12 ಗಂಟೆಯ ನಡುವೆ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಗೆ ಶ್ರೀಧರ್ ದೂರು ನೀಡಿದ್ದರು. ಮನೆಯ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಚಿನ್ನದ ಕರಿಮಣಿ ಸರ, ನೆಕ್ಲೇಸ್, ಚೈನ್, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 32 ಪವನ್ ಗಿಂತಲೂ ಹೆಚ್ಚು ತೂಕದ ಚಿನ್ನದ ಆಭರಣಗಳನ್ನು ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ರವರ ನೇತೃತ್ವದ ತಂಡ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಪೊಲೀಸ್ ಉಪ ಆಯುಕ್ತ ಸಿದ್ಧಾರ್ಥ ಗೋಯಲ್, ಪೊಲೀಸ್ ಉಪ ಆಯುಕ್ತ ಬಿ ಪಿ ದಿನೇಶ್ ಕುಮಾರ್ ಹಾಗೂ ಎ.ಸಿ.ಪಿ ದಕ್ಷಿಣ ಧನ್ಯ ನಾಯಕ್ ರವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಚಿನ್ನಾಭರಣ ಅಂಗಡಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳಾದ ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿ ರವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರುಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ಜೆ.ಜೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.