ಮೂಲತಃ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿಯಾಗಿದ್ದ ಸುಷ್ಮಾ ಅವರು ಬಿಜೆಪಿ ತಳಮಟ್ಟದ ಕಾರ್ಯಕರ್ತೆಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸಿ ಜಯ ಗಳಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರು ಕೂಡ ಆಗಿದ್ದರು.
ಬಿಜೆಪಿ, ಜೆಡಿಎಸ್ 20-20 ಸರಕಾರದಲ್ಲಿ ಸಚಿವರಾಗಿದ್ದ ನಾಗರಾಜ ಶೆಟ್ಟಿಯವರ ಅವಧಿಯಲ್ಲಿ ಸುಷ್ಮಾ ಜನಾರ್ಧನ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಸುಷ್ಮಾ ಅವರಿಗೆ ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ವಕ್ಕರಿಸಿದ್ದರೂ ಚಿಕಿತ್ಸೆ ಪಡೆದು ಗುಣಮುಖರಾಗಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು.
ಇತ್ತೀಚಿಗೆ ಮತ್ತೆ ಕ್ಯಾನ್ಸರ್ ಉಲ್ಬಣಗೊಂಡು ಹಾಸಿಗೆ ಹಿಡಿದಿದ್ದ ಸುಷ್ಮಾ ಅವರು ಇಹಲೋಕ ತ್ಯಜಿಸಿದ್ದಾರೆ.
ಪದವೀಧರೆಯಾಗಿದ್ದ ಅವರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕಿ, ಭಾರತೀಯ ಜೀವವಿಮಾ ನಿಗಮದ ಹಿರಿಯ ಪ್ರತಿನಿಧಿಯಾಗಿದ್ದರು.
ಮೃತ ಸುಷ್ಮಾ ಅವರು ಪತಿ, ಇಬ್ಬರು ಪುತ್ರರನ್ನ ಅಗಲಿದ್ದಾರೆ.
ಸರಳ , ಸಜ್ಜನಿಕೆಯ ಈ ಜನಪ್ರತಿನಿಧಿ ಅಕಾಲಿಕ ಮರಣಕ್ಕೆ ರಾಜಕೀಯ ಗಣ್ಯರು, ಸಮಾಜದ ಧುರೀಣರು ಕಂಬನಿ ಮಿಡಿದಿದ್ದಾರೆ.