LATEST NEWS
ಕೊರೊನಾ ನಿಯಮ ಉಲ್ಲಂಘಿಸಿ ಸಹೋದ್ಯೋಗಿಗೆ ಚುಂಬಿಸಿದಕ್ಕೆ ಬ್ರಿಟನ್ ಆರೋಗ್ಯ ಸಚಿವರ ತಲೆದಂಡ!
ಲಂಡನ್: ಕೊರೊನಾ ಮಾರ್ಗದರ್ಶಿ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಸಹದ್ಯೋಗಿಯೊಬ್ಬರಿಗೆ ಮುತ್ತು ನೀಡಿದ್ದಕ್ಕೆ ಬ್ರಿಟನ್ ನ ಆರೋಗ್ಯ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್ ಹಾನ್‌ಕಾಕ್ ಆರೋಗ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ವಿವಾಹಿತರಾಗಿರುವ ಹಾನ್ಕಾಕ್ (42) ತಮ್ಮ ಕಚೇರಿಯಲ್ಲಿದ್ದ ಗಿನಾ ಕೊಲಾಡಾಂಜೆಲೊ ಎಂಬ ಮಹಿಳೆಯನ್ನು ಚುಂಬಿಸುತ್ತಿರುವುದು ಸಿಸಿಟಿವಿ ಕ್ಯಾಮರಾ ದೃಶ್ಯಗಳಿಂದ ಬಹಿರಂಗಗೊಂಡಿತ್ತು. ಕೊಲಾಡಾಂಜೆಲೊ ಹಾನ್ಕಾಕ್ ಅವರ ಹಳೆಯ ಸ್ನೇಹಿತೆಯಾಗಿದ್ದು, ಹಾಲಿ ಸಹೋದ್ಯೋಗಿಯೂ ಆಗಿದ್ದರು. ಈ ದೃಶ್ಯಗಳನ್ನು ದಿ ಸನ್ ನ್ಯೂಸ್ ಪೇಪರ್ ಜೂ.25 ರಂದು ಪ್ರಕಟಿಸಿತ್ತು.
ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ.
ಮ್ಯಾಟ್ ಹಾನ್ಕಾಕ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಪತ್ರಬರೆದಿದ್ದು, “ಈ ಸಾಂಕ್ರಾಮಿಕದಲ್ಲಿ ತುಂಬಾ ತ್ಯಾಗ ಮಾಡಿದ ಜನರಿಗೆ ನಾವು ನಿರಾಸೆಗೊಳಿಸಿದಾಗ ಪ್ರಾಮಾಣಿಕವಾಗಿರಬೇಕು, ಈ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ವಿಧಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.