ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರನ್ನು ಉಡುಪಿ ಎಸ್ಪಿ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಚೇರ್ಕಾಡಿ ಗ್ರಾಮದ ಮಹಿಳೆಗೆ ಶನಿವಾರ ರಾತ್ರಿ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆದು ತಂದು ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್ಕಾನ್ಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಲಾಗಿದೆ.
ಈ ಮಧ್ಯೆ ಲಾಕಪ್ಡೆತ್ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಿಐಡಿ ಪೊಲೀಸ್ ಅಧೀಕ್ಷಕರು ಹಾಗೂ ಇವರ ತಂಡ ಸೋಮವಾರ ಉಡುಪಿಗೆ ಆಗಮಿಸಿದ್ದು, ಪ್ರಕರಣದ ತನಿಖೆ ಯನ್ನು ಆರಂಭಿಸಿದ್ದಾರೆ. ಅದೇ ರೀತಿ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಶವಗಾರದಲ್ಲಿನ ಮೃತದೇಹವನ್ನು ಪರಿಶೀಲನೆ ನಡೆಸಿ, ವೈದ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಬಿಜು ಮೋನು ಲಾಕಪ್ನಲ್ಲಿ ಮೃತಪಟ್ಟಿರುವ ಮಾಹಿತಿಯನ್ನು ಪೊಲೀಸರು ನ.10ರಂದು ಬೆಳಗ್ಗೆ ಕೊಲ್ಲಂನಲ್ಲಿರುವ ಆತನ ಕುಟುಂಬಸ್ಥರಿಗೆ ನೀಡಿದ್ದರು.
ಅದರಂತೆ ಅಲ್ಲಿಂದ ಹೊರಟ ಕುಟುಂಬಸ್ಥರು ಇಂದು ಬೆಳಗ್ಗೆ ಬ್ರಹ್ಮಾವರ ತಲುಪಿ ಶವಗಾರಕ್ಕೆ ಆಗಮಿಸಿದ ಕುಟುಂಬಸ್ಥರು ಬಿಜು ಮೋನು ಅವರ ಮೃತ ದೇಹವನ್ನು ಪರಿಶೀಲಿಸಿದ್ದರು. ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಮೃತ ಬಿಜು ಮೋನು ಅವರ ಚಿಕ್ಕಪ್ಪನ ಮಗ ಅನೀಶ್ ಡೆನಿಲ್ ನೀಡಿದ ದೂರಿ ನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹ ಹಸ್ತಾಂತರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ನಿರ್ದೇಶನಗಳಂತೆ ಮೃತದೇಹದ ಪಂಚನಾಮೆಯನ್ನು ಉಡುಪಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರು ನಡೆಸಿದರು.