LATEST NEWS
ಉಡುಪಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದು ಮರೆಯಲಾಗದ ಅನುಭವ : ಕೂರ್ಮಾರಾವ್ ಎಂ
ಉಡುಪಿ, ಜುಲೈ 15 : ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 1 ವರ್ಷ 10 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು ಅತ್ಯುತ್ತಮ ರೀತಿಯ ಮರೆಯಲಾಗದ ಅನುಭವ ನೀಡಿದೆ, ಜಿಲ್ಲೆಯ ಅಭಿವೃದ್ದಿಗಾಗಿ ಮುಂದಿನ ದಿನದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ತನ್ನಿಂದ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲೇ ಸದಾ ಮಾದರಿ ಜಿಲ್ಲೆಯನ್ನಾಗಿ ಮಾಡುವ ತುಡಿತ ಜಿಲ್ಲೆಯ ಸಾರ್ವಜನಿಕರು ಮತ್ತು
ನೌಕರರ ವಲಯದಲ್ಲಿದೆ ಈ ಸ್ಪೂರ್ತಿ ಸದಾ ಕಾಲ ಇದೇ ರೀತಿ ಮುಂದುವರೆಯಬೇಕು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯ ಜನತೆ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದು, ಎಲ್ಲರ ಸಹಕಾರದಿಂದ ಒಂದು ತಂಡದ ರೀತಿಯಲ್ಲಿ ಜಿಲ್ಲೆಯ ಪ್ರಗತಿಗೆ ಕಾರ್ಯನಿರ್ವಹಿಸಲು ಸಾದ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ವಿದ್ಯಾವಂತ ಮತ್ತು ಬುದ್ದಿವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲಿನ ಹಲವು ಸವಾಲುಗಳನ್ನು ಜಿಲ್ಲಾಧಿಕಾರಿಯಾಗಿದ್ದ ಕೂರ್ಮಾರಾವ್ ಎಂ. ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಮತ್ತು ಪ್ರಾಮಾಣಿಕ ಸೇವೆ ನೀಡುವ ನಿಟ್ಟಿನಲ್ಲಿ , ಜಿಲ್ಲೆಯ ಪ್ರಮುಖ ಇಲಾಖೆಗಳಾದ ಕಂದಾಯ, ಜಿಲ್ಲಾ ಪಂಚಾಯತ್ ಮತ್ತು ಪೊಲೀಸ್ ಇಲಾಖೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಿದೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಪ್ರಗತಿಗೆ ಒಟ್ಟಾಗಿ ಶ್ರಮಿಸೋಣ ಎಂದರು.
ಜಿ.ಪಂ. ಸಿಇಓ ಪ್ರಸನ್ನ ಮಾತನಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ತಾಳ್ಮೆಯ ಗುಣ,ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣ ಎಲ್ಲಾ ಅಧಿಕಾರಿಗಳಿಗೆ ಮಾದರಿಯಾಗಬೇಕು. ಜಿಲ್ಲಾ ಪಂಚಾಯತ್ ನ ಹಲವು ಯಶಸ್ವಿ ಯೋಜನೆಗಳಿಗೆ ಉತ್ತಮ ಸಹಕಾರ ನೀಡಿದ್ದು, ಚುನಾವಣೆಯಲ್ಲಿ ಸ್ವೀಪ್ ಮೂಲಕ ರಾಜ್ಯ ಮತ್ತು ದೇಶದಲ್ಲೇ ಗಮನ ಸೆಳೆಯುವಂತಹ ಕಾರ್ಯಕ್ರಮಗಳನ್ನು ಇವರ ಮಾರ್ಗದರ್ಶನದಲ್ಲಿ ಮಾಡಲಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಇವರಿಂದ ಎನ್.ಐ.ಸಿ. ಮೂಲಕ ಕಂದಾಯ ಇಲಾಖೆಗೆ ವಿವಿಧ ರೀತಿಯ ಬಹುಪಯೋಗಿಯ 3 ನೂತನ ತಂತ್ರಾಂಶಗಳನ್ನು ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಎಸ್ಪಿ ಅಕ್ಷಯ್ ಎಂ ಹಾಕೆ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಎಲ್ಲಾ ಅಗತ್ಯ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ, ಉಡುಪಿಯನ್ನು ಸೇಫ್ ಸಿಟಿ ಮಾಡುವ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ನಿರ್ವಹಣೆ ಮೂಲಕ ಸ್ಮಾರ್ಟ್ ಸಿಟಿ ಮಾಡಲು ಒತ್ತು ನೀಡಿದ್ದರು ಎಂದರು.