Connect with us

    LATEST NEWS

    ಸಣ್ಣ ನೀರಾವರಿ ಇಲಾಖೆಯ 15000 ಕೋಟಿ ರೂ ಮೊತ್ತದ ಕಾಮಗಾರಿಗಳು ಈ ವರ್ಷದಲ್ಲಿ ಪೂರ್ಣ: ಸಚಿವ ಬೋಸರಾಜು 

    ಉಡುಪಿ, ಸೆಪ್ಟಂಬರ್ 8 : ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೈಗೊಂಡಿರುವ 15000 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ಈ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ರಾಜ್ಯದಲ್ಲಿ ಅಂರ್ತಜಲ ವೃಧ್ದಿಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಹೇಳಿದರು.

    ಅವರು ಇಂದು ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಶಿವಪುರದಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಭೇಟಿ , ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಅಂತರ್ಜಲ ವೃದ್ದಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ನಿರ್ಮಾಣ, ಕಿಂಡಿ ಅಣೆಕಟ್ಟು ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ, ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದ 12,696 ಕಾಮಗಾರಿಗಳನ್ನು ನಡೆಯುತ್ತಿದ್ದು, ಈಗಾಗಲೇ ಹಲವು ಕಾಮಗಾರಿಗಳು ಶೇ.60 ರಿಂದ 70 ರಷ್ಟು ಮುಕ್ತಾಯಗೊಂಡಿದ್ದು, ಈ ಕಾಮಗಾರಿಗಳು ಸೇರಿದಂತೆ ಬಾಕಿ ಇರುವ 15000 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪ್ರಥಮಾದ್ಯತೆಯಲ್ಲಿ ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.


    ಸಣ್ಣ ನೀರಾವರಿ ಇಲಾಖೆವತಿಯಿಂದ ರಾಜ್ಯದಲ್ಲಿ ಕುಡಿಯುವ ನೀರು ಮತ್ತು ಅಂರ್ತಜಲ ಅಭಿವೃದ್ದಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ರೈತರಿಗೆ ಕೃಷಿ ಉಪಯೋಗಕ್ಕೆ ಮತ್ತು ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ಅಂರ್ತಜಲ ವೃಧ್ದಿ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಹಿಂದಿನ ಕಾಮಗಾರಿಗಳನ್ನು ಹೊರತುಪಡಿಸಿ ಈಗಾಗಲೇ 2000 ಕೋಟಿ ರೂ ಮೊತ್ತದ ಹೊಸ ಕಾಮಗಾರಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.

    ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಕುರಿತಂತೆ ಪ್ರತಿಕ್ರಿಯಿದ ಸಚಿವರು, ಶಿವಪುರದ ದೇವಸ್ಥಾನ ಬೆಟ್ಟು ನಲ್ಲಿ 150 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಕುರಿತಂತೆ ಪರಿಶೀಲಿಸಿದ್ದು, ಸ್ಥಳೀಯ ಜನತೆ ಮತ್ತು ಜನಪ್ರತಿನಿಧಿಗಳು ಯೋಜನೆ ಉತ್ತಮವಾಗಿದ್ದು ಅನುಕೂಲವಾಗಿದೆ ಎಂದಿದ್ದಾರೆ ಎಂದರು. ಚಾರದಲ್ಲಿ ನಡೆಯುತ್ತಿರುವ 70 ಕೋಟಿ ರೂ ವೆಚ್ಚದ ಕಿಂಡಿ ಅಣೆಕಟ್ಟು ಕಾಮಗಾರಿಯು ಮಾರ್ಚ್ 2024 ರೊಳಗೆ ಪೂರ್ಣಗೊಳ್ಳಲಿದ್ದು ಇದರಿಂದ 2000 ಎಕ್ರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸಮೀಪದ ಪಂಚಾಯತ್ ಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ , ಕಾಮಗಾರಿಯ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಕಂಡು ಬಂದರೆ ಸಂಬಂದಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಹಾಗೂ ಇಂಜಿನಿಯರ್ ಗಳು ತಪ್ಪಿತಸ್ಥರಾದಲ್ಲಿ ಸೇವೆಯಿಂದ ವಜಾ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *