LATEST NEWS
ಡಾಕ್ಯುಮೆಂಟ್ ತಪಾಸಣೆ ನೆಪದಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿಟ್ಟ ಉಡುಪಿ ಪೊಲೀಸರು
ಡಾಕ್ಯುಮೆಂಟ್ ತಪಾಸಣೆ ನೆಪದಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿಟ್ಟ ಉಡುಪಿ ಪೊಲೀಸರು
ಉಡುಪಿ ಅಕ್ಟೋಬರ್ 26: ಉಡುಪಿ ಪೊಲೀಸರು ವಾಹನಗಳ ಡಾಕ್ಯುಮೆಂಟ್ ತಪಾಸಣೆ ನೆಪದಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆ ಎಂಬಲ್ಲಿ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಸಂಚಾರ ನಿಯಮ ಉಲ್ಲಂಘಿಸಿದಾಗ ಸೆಲ್ಯೂಟ್ ಹೊಡೆದಿದ್ದ ಉಡುಪಿ ಪೊಲೀಸರು ಈಗ ಬೈಕ್ ಸವಾರನ ಜೀವಕ್ಕೆ ಸಂಚಕಾರ ತರಲು ಹೋಗಿ ಸಾರ್ವಜನಿಕರ ಪ್ರತಿಭಟನೆ ಎದುರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಕಳೆದೆರಡು ದಿನಗಳಿಂದ ಕ್ಯಾರ್ ಚಂಡಮಾರುತದಿಂದಾಗಿ ಭಾರಿ ಮಳೆ ಸುರಿಯುತ್ತಿದ್ದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಮಳೆಯ ನಡುವೆಯೂ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ ತಾಲೂಕು ತೆಕ್ಕಟೆ ಸಮೀಪ ಉಡುಪಿ ಪೊಲೀಸರು ವಾಹನಗಳ ಡಾಕ್ಯುಮೆಂಟ್ ತಪಾಸಣೆ ಮಾಡಲು ಹೋಗಿದ್ದಾರೆ.
ತಪಾಸಣೆ ನೆಪದಲ್ಲಿ ಚಲಿಸುತ್ತಿದ್ದ ಬೈಕ್ ನ ಹ್ಯಾಂಡಲ್ ಬಾರ್ ನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಹಿಡಿದು ಎಳೆದಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಲೆನ್ಸ್ ತಪ್ಪಿ ಬೈಕ್ ಸವಾರ ರೋಡಿಗೆ ಬಿದ್ದಿದ್ದಾನೆ. ಅದೃಷ್ಠವಶಾತ ಹಿಂದೆ ಯಾವುದೇ ವಾಹನಗಳ ಇಲ್ಲದ ಕಾರಣ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪೊಲೀಸರ ಈ ವರ್ತನೆಗೆ ಖಂಡಿಸಿ ಘಟನಾ ಸ್ಥಳದಲ್ಲಿ ನೂರಾರು ಸಾರ್ವಜನಿಕ ಜಮಾವಣೆಯಾಗಿ ಪೊಲೀಸ್ ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪೊಲೀಸ್ ಉನ್ನತ ಅಧಿಕಾರಿಗಳ ಸ್ಥಳಕ್ಕೆ ಬರುವಂತೆ ಜನರು ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ ನೂರಾರು ಜನರು ಪೊಲೀಸ್ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ನಡೆಸಿದ ಹಿನ್ನಲೆ ಸ್ಥಳಕ್ಕೆ ಉಡುಪಿ ಡಿವೈಎಸ್ ಪಿ ಜೈ ಶಂಕರ್ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು.
ಕಳೆದ ತಿಂಗಳು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಉಡುಪಿಗೆ ಬಂದಾಗ ಕಾರಿನ ಸೀಟ್ ಬೆಲ್ಟ್ ಹಾಕದೆ ಕಾರಿನಲ್ಲಿ ಸಂಚಾರ ನಡೆಸಿದ್ದರು. ಈ ಸಂದರ್ಭ ಪಕ್ಕದಲ್ಲೇ ಪೊಲೀಸರಿದ್ದರೂ ಕೂಡ ಸಂಚಾರ ನಿಯಮ ಉಲ್ಲಂಘಿಸಿದ ಸಂಸದ ನಳಿನ್ ಕುಮಾರ್ ಗೆ ಸೆಲ್ಯುಟ್ ಹೊಡೆದಿದ್ದರು. ಜನಪ್ರತಿನಿಧಿಗಳು ಕಾನೂನೂ ಉಲ್ಲಂಘಿಸಿದರೆ ಉಡುಪಿಯಲ್ಲಿ ಸೆಲ್ಯೂಟ್ ಹೊಡೆಯುವ ಪೊಲೀಸರು ಸಾಮಾನ್ಯ ಜನರ ಜೀವದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ.