Connect with us

LATEST NEWS

ಉಡುಪಿ :  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ,ಇಬ್ಬರು ಅಪರಾಧಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಪೋಕ್ಸೋ ಕೋರ್ಟ್..!

ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಉಡುಪಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ 3 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ ಮೂಲದ ಪ್ರವೀಣ್ ಕುಮಾರ್(20) ಹಾಗೂ ಅಜಯ್ ಕುಮಾರ್ ಎ.(19) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಕುಂದಾಪುರ ಮೂಲದ ನೊಂದ ಬಾಲಕಿ ತನ್ನ ತಂದೆತಾಯಿ ಜೊತೆ ಶಿವಮೊಗ್ಗದಲ್ಲಿ ವಾಸವಾಗಿದ್ದು, ಈ ಸಂದರ್ಭದಲ್ಲಿ ಆಕೆಗೆ ಆರೋಪಿಗಳ ಪರಿಚಯವಾಗಿತ್ತು. ಬಾಲಕಿ ತನ್ನ ಅಜ್ಜಿ ಮನೆ ಉಡುಪಿಯ ಕುಂದಾಪುರಕ್ಕೆ ಬಂದು ವಾಸ ಮಾಡಿಕೊಂಡಿದ್ದು, ಇಲ್ಲಿಯೇ ಶಾಲೆಗೆ ಹೋಗುತ್ತಿದ್ದರು.
2022ರ ನವೆಂಬರ್ ತಿಂಗಳಲ್ಲಿ ಬಾಲಕಿ ಒಬ್ಬಳೇ ಮನೆಯಲ್ಲಿವಾಗ ಆಕೆಯ ಅಜ್ಜಿ ಮನೆಗೆ ಬಂದ ಆರೋಪಿಗಳು ಆಕೆಯೊಂದಿಗೆ ಮಾತನಾಡಿ, ನಮಗೆ ಊರನ್ನು ತೋರಿಸು ಎಂದು ತಿಳಿಸಿದ್ದರು. ಸ್ನೇಹಿತರಾದ ಆರೋಪಿಗಳನ್ನು ನೊಂದ ಬಾಲಕಿ ತನ್ನ ಊರಿನಲ್ಲಿ ಸುತ್ತಾಡಿಸಲು ಕರೆದುಕೊಂಡು ಹೋಗಿದ್ದು, ಆ ವೇಳೆ ಆರೋಪಿತರು ಹಾಡಿಯೊಂದಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಲಾಗಿತ್ತು. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿಬಿದಿದ್ದು, ಈ ವೇಳೆ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದರು. ಈ ಬಗ್ಗೆ ಹುಡುಕಾಡಿದಾಗ ನೊಂದ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರ ತಿಳಿದು ಆಕೆಯ ಅಜ್ಜಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅಂದಿನ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ತನಿಖೆ ನಡೆಸಿ, ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 23 ಸಾಕ್ಷಿಗಳ ಪೈಕಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಒಟ್ಟು 21 ದಾಖಲೆಗಳನ್ನು ಸಾಕ್ಷ್ಯವಾಗಿ ಗುರುತಿಸಲಾಗಿದೆ. ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಮೊಬೈಲ್ ನಂಬರ್‌ಗಳ ಟವರ್ ಲೊಕೆಷನ್‌ಗಳನ್ನು ಆಧರಿಸಿ ಆರೋಪಿತರ ವಿರುದ್ಧ ಪ್ರಕರಣ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿತರಿಗೆ 3ವರ್ಷಗಳ ಕಠಿಣ ಶಿಕ್ಷೆ ಹಾಗೂ 14ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ದಂಡದ ಮೊತ್ತದಲ್ಲಿ 10ಸಾವಿರ ರೂ. ನೊಂದ ಬಾಲಕಿಗೆ ಹಾಗೂ 4000 ರೂ. ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 50ಸಾವಿರ ರೂ. ಪರಿಹಾರ ನೀಡುವಂತೆ ನಿರ್ದೇಶನ ನೀಡಿ ಆದೇಶಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *