LATEST NEWS
ಉಡುಪಿ : ನೂರಾರು ಜನರ ಸಂಕಷ್ಟಗಳಿಗೆ ಪರಿಹಾರ ನೀಡಿದ ಅಜಾತಶತ್ರುವಿಗೆ ಜಾತಿ ಧರ್ಮದ ಎಲ್ಲೆ ಮೀರಿದ ಜನಸಾಗರದ ಭಾಷ್ಪಾಂಜಲಿ..!
ಉಡುಪಿ : ಅವರು ಸಮಾಜರತ್ನ ರಂಗ ಪೋಷಕ,ಅದೆಷ್ಟೋ ಮನೆಯ ಮನದ ನೋವುಗಳ ದೂರಮಾಡಿದ ಅವರಿಗೆ ತನ್ನ ಸಂಕಷ್ಟ ಸಂಕಟ ಪರಿಹರಿಸಲಾಗದೆ ಪತ್ನಿಯೊಂದಿಗೆ ಇಹಲೋಕ ತ್ಯಜಿಸಿದರು. ಪ್ರೀತಿಯ ಲೀಲಣ್ಣ ದಂಪತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಜಾತಿ ಧರ್ಮ ಮತ ಭೇದ ಮರೆದು ಜನಸಾಗರವೇ ಹರಿದು ಬಂತು..
ಕಾಪು ಎಂದಾಕ್ಷಣ ಲೀಲಾಧರ ಶೆಟ್ಟಿ ನೆನಪಾಗದೆ ಇರಲು ಸಾಧ್ಯವೇ ಇಲ್ಲ. ತನ್ನ ಬದುಕಿನ ಸಂಪೂರ್ಣ ಸಮಯವನ್ನು ಸಮಾಜಕ್ಕೆ ಧಾರೆ ಎರೆದವರು. ಅದೆಷ್ಟೋ ಜನರಿಗೆ ಉದ್ಯೋಗ ಕೊಡಿಸಲು, ಸಹಾಯ ಯಾಚಿಸಿ ಬಂದವರಿಗೆ ಹಿಂದೆ ಮುಂದೆ ನೋಡದೆ ಜಾತಿ ಧರ್ಮಗಳ ಎಲ್ಲೆ ಮೀರಿ ನಿಜ ಮಾನವನಾಗಿ ಬದುಕಿದವರು. ಮಾನವೀಯತೆಗೆ ಪರ್ಯಾಯ ಶಬ್ದ ಎಂಬಂತೆ ಬದುಕಿದವರು ಲೀಲಣ್ಣ. ಊರಿನ ಜನರಿಗೆ ಅವರೆಷ್ಟು ಅನಿವಾರ್ಯ ಎಂದರೆ ಅವರಿಲ್ಲದ ಯಾವ ಕಾರ್ಯಕ್ರಮವೂ ಪೂರ್ಣ ಆಗೋದಿಲ್ಲ ಅನಿಸುವಷ್ಟರ ಮಟ್ಟಿಗೆ ಜನರ ಜೊತೆ ಬೆರೆತವರು.ಇದಕ್ಕೆಲ್ಲಾ ಸಾಕ್ಷಿ ಎಂಬಂತೆ ಅವರ ಕೊನೆಯ ಯಾತ್ರೆಗೆ ಸೇರಿದ ಜನಸ್ತೋಮ. ಕಾಪು ಜಾಮಿಯಾ ಮಸೀದಿಯ ಮುಂಭಾಗದಿಂದ ಹೊರಟ ಅವರ ಅಂತಿಮ ಯಾತ್ರೆಗೆ ಇಕ್ಕೆಲಗಳಲ್ಲಿ ಭಾಷ್ಪಾಂಜಲಿ ಸುರಿಯುತ್ತಿತ್ತು. ಮೃತರ ಗೌರಾವಾರ್ಥ ಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಇದು ಸ್ವಯಂಪ್ರೇರಿತವಾಗಿ ಸಾರ್ವಜನಿಕರು ಸಲ್ಲಿಸಿದ ಗೌರವ. ಅದೆಂತಹ ಮುಗ್ಧ ನಗು ಅದೆಂತಹ ಬಾಂಧವ್ಯ. ಎಳೆಯವರಿಂದ ಹಿಡಿದು ಹಿರಿಯರವರೆಗೂ ಅವರು ಮಾತನಾಡಿಸುತ್ತಿದ್ದ ರೀತಿ …. ಅಜಾತಶತ್ರುವಾಗಿ ನಿತ್ಯ ಜನರ ಜೊತೆ ಬದುಕಿದರು. ಆದರೆ ಅದ್ಯಾವ ಘಳಿಗೆಯಲ್ಲಿ ತನ್ನ ಬದುಕಿನ ಒಂದು ಘಟನೆಗೆ ಜರ್ಝರಿತವಾದ ಮನಸ್ಸು ಜೀವನಕ್ಕೆ ಕೊನೆ ಹಾಡಿತು.
ಅವರು ಮಹಾನ್ ವ್ಯಕ್ತಿ ಭಜನೆ ಜಾತ್ರೆ ಬ್ರಹ್ಮಕಲಶ ನೇಮೋತ್ಸವ ಮಾತ್ರವಲ್ಲದೆ ಊರಿನ ಜನರ ಕಷ್ಟಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು. ರಂಗತರಂಗ ಎಂಬ ನಾಟಕ ಸಂಸ್ಥೆಯನ್ನು ಹದಿನೇಳು ವರ್ಷ ಮುನ್ನಡೆಸಿದವರು.ರಂಗಭೂಮಿಯನ್ನು ಮತ್ತು ಕಲಾವಿದರನ್ನು ಅತ್ಯಂತ ಪ್ರೀತಿಯಿಂದ ನೋಡಿ ಕಲಾವಿದರ ಏಳಿಗೆಗಾಗಿ ಸದಾ ಶ್ರಮಿಸಿದವರು ಲೀಲಣ್ಣ. ಕಷ್ಟದಲ್ಲಿದ್ದ ಯಾವುದೇ ವ್ಯಕ್ತಿಗೆ ಹೆಗಲು ಕೊಟ್ಟವರು. ಊರಿನ ಅದೆಷ್ಟೋ ಮನಸ್ತಾಪಗಳಿಗೆ ಮಧ್ಯಸ್ಥಿಕೆ ವಹಿಸಿ ರಾಜಿ ಸಂದಾನ ನಡೆಸಿದವರು. ಹೀಗೆ ಲೀಲಣ್ಣ ಎಲ್ಲರ ಪ್ರೀತಿಗೆ ಪಾತ್ರರಾದವರು. ಮಕ್ಕಳಿಲ್ಲದ ಕೊರಗು ನೀಗಿಸಲು ಒಂದು ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿ ಪ್ರೀತಿಯಿಂದ ಬೆಳೆಸಿದರು. ಆದರೆ ಅದ್ಯಾವ ಘಳಿಗೆಯಲ್ಲಿ ನಡೆಯಬಾರದ್ದು ನಡೆಯಿತೋ ಹೊರಟೇ ಬಿಟ್ಟರು ಯಾರಿಗೂ ಹೇಳದೆ…
ಮನುಷ್ಯನಿಗೆ ಸಂಸ್ಕಾರ ಮಾನವೀಯತೆ ಮತ್ತು ಮರ್ಯಾದೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟು ಬಯಸದ ಸಾವಿಗೆ ಕೊರಳೊಡ್ಡಿದರು ಲೀಲಣ್ಣ ದಂಪತಿ. ಇಂತಹ ಸಾವು ಯಾರಿಗೂ ಬಾರದಿರಲಿ..ಲೀಲಣ್ಣ ಎಂದಿಗೂ ನಮ್ಮಡನೆ ಇದ್ದಾರೆ ಅನ್ನೋದೇ ಎಲ್ಲರ ಮನದ ಭಾವನೆ ಕೂಡ ಹೌದು..