LATEST NEWS
ಉಡುಪಿ ಪರ್ಯಾಯ ಶೋಭಾಯಾತ್ರೆಯಲ್ಲಿ ಸಪ್ತಮಠಗಳ ಮಠಾಧೀಶರ ಗೈರು…!!

ಉಡುಪಿ ಜನವರಿ 18 : ಪುತ್ತಿಗೆ ಶ್ರೀಗಳ ಪರ್ಯಾಯದಲ್ಲಿ ಮತ್ತೆ ಉಡುಪಿಯ ಇನ್ನಿತ ಸಪ್ತ ಮಠಗಳ ಮಠಾಧೀಶರ ಗೈರು ಹಾಜರಿ ನಿನ್ನೆ ಎದ್ದು ಕಾಣಿಸಿದ್ದು, ಪರ್ಯಾಯದ ಅಂಗವಾಗಿ ನಡೆದ ಪುತ್ತಿಗೆ ಮಠದ ಶ್ರೀಗಳ ಶೋಭಾಯಾತ್ರೆಯಲ್ಲಿ ಸಪ್ತ ಮಠಗಳ ಮಠಾಧೀಶರು ಪಾಲ್ಗೊಂಡಿರಲಿಲ್ಲ.
ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿ ಅಲ್ಲಿಂದ ಕೃಷ್ಣ ಮಠದವರೆಗೆ ನಡೆಯುವ ಶೋಭಾಯಾತ್ರೆಯಲ್ಲಿ ಉಡುಪಿಯ ಕೃಷ್ಣಮಠಕ್ಕೆ ಸಂಬಂಧಿಸಿದ ಎಲ್ಲ ಅಷ್ಟ ಮಠಗಳ ಮಠಾಧೀಶರು ಪಾಲ್ಗೊಳ್ಳುವುದು ವಾಡಿಕೆ. ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಅವರನ್ನು ಶೋಭಾಯಾತ್ರೆಯಲ್ಲಿ ಕರೆತರುವುದು ಸಂಪ್ರದಾಯ. ಆದರೆ, ಯಾತ್ರೆಯಲ್ಲಿ ಪುತ್ತಿಗೆ ಶ್ರೀ ಮತ್ತು ಅವರ ಕಿರಿಯ ಶ್ರೀ ಮಾತ್ರ ಇದ್ದರು.

ವಿಶ್ವ ಗೀತಾ ಪರ್ಯಾಯವಾಗಿ ಮುಂದಿನ ಎರಡು ವರ್ಷ ಶ್ರೀಕೃಷ್ಣ ಪೂಜಾ ಕೈಂಕರ್ಯ ನೆರವೇರಿಸಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಸಂದರ್ಭವನ್ನು ಶ್ರೀ ಕೃಷ್ಣನಗರ ಉಡುಪಿ ಮನಸಾರೆ ಸ್ವಾಗತಿಸಿತು.
ಕಿನ್ನಿಮೂಲ್ಕಿ ಸ್ವಾಗತಗೋಪುರದ ಬಳಿಯಿಂದ ಆರಂಭಗೊಂಡ ಭವ್ಯ ಮೆರವಣಿಗೆಗೆ ಜೋಡುಕಟ್ಟೆಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಮಠದ ಪಟ್ಟದ ದೇವರೊಂದಿಗೆ ಕೂಡಿಕೊಂಡರು. ಮೆರವಣಿಗೆಯುದ್ದಕ್ಕೂ ಸೇರಿದ್ದ ಭಕ್ತ ಸಮೂಹ ಶ್ರೀಕೃಷ್ಣ ದೇವರಿಗೆ, ಶ್ರೀಪಾದರಿಗೆ ಜಯಕಾರ ಹಾಕಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಗುರುವಾರ ರಾಜಾಂಗಣದಲ್ಲಿ ಸಾರ್ವಜನಿಕ ದರ್ಬಾರ್ ನೆರವೇರಿತು. ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕ ದರ್ಬಾರ್ಗೆ ಹಾಜರಾದರು. ಸಂಪ್ರದಾಯದಂತೆ ಮೊದಲು ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣ ಮಠದಲ್ಲಿ ಖಾಸಗಿ ದರ್ಬಾರ್ ನಡೆಸಿದರು. ನಂತರ ಸಾರ್ವಜನಿಕ ದರ್ಬಾರ್ನಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾಗಿಯಾದರು.
ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾರ್ವಜನಿಕ ಪರ್ಯಾಯ ದರ್ಬಾರ್ನಲ್ಲಿ ಅನೇಕ ರಾಜಕೀಯ ಮುಖಂಡರೂ ಭಾಗವಹಿಸಿದರು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಸೇರಿದಂತೆ ಹತ್ತಾರು ಟ್ಯಾಬ್ಲೋಗಳು ಗಮನ ಸೆಳೆದವು. ಸ್ಪೀಕರ್ ಯು.ಟಿ ಖಾದರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜಕೀಯ ನಾಯಕರ ಜತೆ ಸ್ಥಳೀಯ ಶಾಸಕರೂ ಭಾಗಿಯಾದರು.