DAKSHINA KANNADA
ಉಡುಪಿ ಪರ್ಯಾಯ : ಯತಿಗಳ ಗೈರು ಹಾಜರಿಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು.!
ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದ 252ನೇ ಪರ್ಯಾಯ ಮಹೋತ್ಸವದಲ್ಲಿ ಯತಿಗಳ ಗೈರು ಹಾಜರಿಯಲ್ಲಿ ಉಡುಪಿ ಪುತ್ತಿಗೆ ಮಠದ ಪರ್ಯಾಯ ಸ್ವರ್ವಜ್ಞ ಪೀಠಾರೋಹನ ಮಾಡಿ ನಾಲ್ಕನೇ ಬಾರಿಗೆ ಶ್ರೀಕೃಷ್ಣನ ದ್ವೈವಾರ್ಷಿಕ ಪೂಜಾಧಿಕಾರವನ್ನು ಸ್ವೀಕರಿಸಿದರು.
ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದ ಪುತ್ತಿಗೆ ಮಠದ ಅವಳಿ ಶ್ರೀಗಳು ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿದರು. ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬಳಿಕ ಕೃಷ್ಣ ಮಠ ಪ್ರವೇಶಿಸಿದ ಅವರು, ಅಕ್ಷಯ ಪಾತ್ರೆ ಸ್ವೀಕರಿಸಿ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಎರಡು ವರ್ಷಗಳ ಅವಧಿಗೆ ಕೃಷ್ಣ ಪೂಜೆಯ ದೀಕ್ಷೆಯನ್ನು ಸ್ವೀಕರಿಸಿದರು. ಮಧ್ವ ಪಂಥದ ಯತಿಯಾಗಿದ್ದು, ಸಮುದ್ರೋಲ್ಲಂಘನೆ ಮಾಡಿದ್ದು ಸರಿಯಲ್ಲ ಎಂದು ವಾದಿಸುವ ಉಳಿದ ಮಠಗಳ ಶ್ರೀಗಳು ಈ ಪರ್ಯಾಯೋತ್ಸವದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಪುತ್ತಿಗೆ ಶ್ರೀಗಳು ತಮ್ಮ ಶಿಷ್ಯ ಸುಶೀಂದ್ರ ತೀರ್ಥರ ಸಾಥ್‌ನೊಂದಿಗೆ ಪರ್ಯಾಯ ಪೀಠವೇರಿದರು.
ಬುಧವಾರ ರಾತ್ರಿಯಿಂದಲೇ ಆರಂಭಗೊಂಡ ಪರ್ಯಾಯ ಮಹೋತ್ಸವ ದರ್ಬಾರ್ (Paryaya Darbar) ಕಾರ್ಯಕ್ರಮದೊಂದಿಗೆ ಗುರುವಾರ ಬೆಳಗ್ಗೆ ಮುಕ್ತಾಯಗೊಂಡಿತು.ಉಡುಪಿ ಕೃಷ್ಣ ಮಠದ ವ್ಯಾಪ್ತಿಯಲ್ಲಿ ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠ ಹೀಗೆ ಎಂಟು ಮಠಗಳಿವೆ. ಪ್ರತಿ ಮಠಕ್ಕೂ ಎರಡು ವರ್ಷಕ್ಕೊಮ್ಮೆ ಪೂಜಾಧಿಕಾರ ಹಸ್ತಾಂತರವಾಗುತ್ತದೆ. ಅಂದರೆ ಒಂದು ಮಠಕ್ಕೆ ಪ್ರತಿ 14 ವರ್ಷಕ್ಕೊಮ್ಮೆ ಪೂಜಾಧಿಕಾರ ದೊರೆಯುತ್ತದೆ.ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು 2008ರಲ್ಲಿ ಪರ್ಯಾಯ ಪೀಠಾರೋಹಣ ಮಾಡಿದ್ದು, ಇದೀಗ ಅಷ್ಟಮಠಗಳ ಒಂದು ಸರತಿ ಮುಗಿದು ಮತ್ತೆ ಅಧಿಕಾರ ಸಿಕ್ಕಿದೆ. ಕಳೆದ ಬಾರಿಯ ಪರ್ಯಾಯದಲ್ಲೂ ಯಾವ ಯತಿಗಳೂ ಭಾಗವಹಿಸಿರಲಿಲ್ಲ. ಭೀಮನಕಟ್ಟೆ ಮಠದ ಶ್ರೀಗಳು ಅವರಿಗೆ ಸಾಥ್ ನೀಡಿದ್ದರು. ಈ ನಡುವೆ ಪುತ್ತಿಗೆ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿದ್ದರಿಂದ ಶಿಷ್ಯರು ಈ ಬಾರಿ ಸಾಥ್ ನೀಡಿದ್ದಾರೆ. ಸರ್ವಜ್ಞ ಪೀಠಾರೋಹಣದ ಬಳಿಕ ಅವರು ರಾಜಾಂಗಣಕ್ಕೆ ಆಗಮಿಸಿ ಪರ್ಯಾಯ ದರ್ಬಾರ್‌ನಲ್ಲಿ ಭಾಗವಹಿಸಿದರು. ದರ್ಬಾರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ಪೀಕರ್ ಯು.ಟಿ. ಖಾದರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಡೆದ ಪರ್ಯಾಯ ಮೆರವಣಿಗೆಯ ಅಬ್ಬರ ಮುಗಿಲು ಮುಟ್ಟಿತ್ತು. ಪರ್ಯಾಯ ದರ್ಬಾರ್‌ನಲ್ಲಿ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.ಪುತ್ತಿಗೆ ಶ್ರೀಗಳು ತಮ್ಮ ಶಿಷ್ಯ ಸಮೇತರಾಗಿ ಗುರುವಾರ ಬೆಳಗಿನ ಜಾವ 1.30ರ ವೇಳೆಗೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಶ್ರೀಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಯತಿ ದ್ವಯರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆ ತರಲಾಯಿತು.
ಮೆರವಣಿಗೆಯಲ್ಲಿ ಹತ್ತಾರು ಟ್ಯಾಬ್ಲೋಗಳು, ರಾಜ್ಯದ ನಾನಾ ಭಾಗಗಳಿಂದ ಬಂದ ಕಲಾ ತಂಡಗಳು ಭಾಗಿಯಾಗಿದ್ದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಗಮನ ಸೆಳೆಯಿತು.ಚಂಡೆ ಬಳಗ, ಭಜನಾ ತಂಡಗಳ ಕಲರವ, ಹುಲಿ ವೇಷ ಸಹಿತ ಬಗೆ ಬಗೆಯ ವೇಷಧಾರಿಗಳ ಅಬ್ಬರ ಜೋರಾಗಿತ್ತು. ಮೆರವಣಿಗೆಯ ಕೊನೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಸುಶೀಂದ್ರ ತೀರ್ಥರನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು.