LATEST NEWS
ಭಟ್ಕಳ ಮೂಲದ ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಕೊರೊನಾ ಮುಕ್ತವಾದ ಉಡುಪಿ ಜಿಲ್ಲೆ

ಭಟ್ಕಳ ಮೂಲದ ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖ – ಕೊರೊನಾ ಮುಕ್ತವಾದ ಉಡುಪಿ ಜಿಲ್ಲೆ
ಉಡುಪಿ ಎಪ್ರಿಲ್ 24: ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಕೊರೊನಾ ಸೋಂಕಿತ ಗರ್ಭಿಣಿಯ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಈ ಮೂಲಕ ಉಡುಪಿ ಜಿಲ್ಲೆ ಸಂಪೂರ್ಣ ಕೊರೊನಾ ಮುಕ್ತವಾಗಿದೆ.
6 ತಿಂಗಳ ಗರ್ಭಿಣಿಯಾಗಿರುವ ಮಹಿಳೆಗೆ ಕೊರೊನಾ ಸೊಂಕು ತಗುಲಿದ್ದು ಕಳೆದ 15 ದಿನಗಳಿಂದ ಉಡುಪಿಯ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗರ್ಭಿಣಿಯ ಎರಡು ಕೋವಿಡ್ ತಪಾಸಣೆಯಲ್ಲೂ ನೆಗೆಟಿವ್ ಎಂದು ವರದಿ ಬಂದಿದೆ. ಹೀಗಾಗಿ ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೈದ್ಯರು ಮತ್ತು ಜಿಲ್ಲಾಡಳಿತ ಮಹಿಳೆಯನ್ನು ವಿಶೇಷವಾಗಿ ಬೀಳ್ಕೊಟ್ಟರು. ಉಡುಪಿಯ ಶಂಕರಪುರ ಮಲ್ಲಿಗೆ, ಹಣ್ಣುಗಳು, ಸಿಹಿತಿಂಡಿಗಳನ್ನು ಕೊಟ್ಟು ಶುಭ ಹಾರೈಸಿ ಡಿಸ್ಚಾರ್ಜ್ ಮಾಡಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ “ಕೊರೋನಾ ಪಾಸಿಟಿವ್ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಈ ದಿನ ಜಿಲ್ಲೆಯ ಪಾಲಿಗೆ ಉತ್ತಮ ದಿನವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿತ್ತು. ಮಗುವನ್ನು ಉಳಿಸುವುದು ವೈದ್ಯರಿಗೆ ಸವಾಲಾಗಿತ್ತು. ಇದೇ ಕಾರಣಕ್ಕೆ ಬೇರೆಲ್ಲಾ ಆಸ್ಪತ್ರೆಗಳಲ್ಲಿ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು.”ಆರಂಭಿಕ ದಿನಗಳಲ್ಲಿ, ಜಿಲ್ಲಾ ಆಡಳಿತ ಮತ್ತು ಟಿಎಂಎ ಪೈ ಆಸ್ಪತ್ರೆ ಒಪ್ಪಂದ ಮಾಡಿಕೊಂಡಿದ್ದು ಉಡುಪಿ ಜಿಲ್ಲೆಯ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೆವು.
ಆ ಹಿನ್ನೆಲೆಯಲ್ಲಿ ಮೊದಲು ಹೊರ ಜಿಲ್ಲೆಯ ಗರ್ಭಿಣಿಯನ್ನು ಸೇರಿಸಿಕೊಳ್ಳುವುದಕ್ಕೆ ನಾವು ಸಹ ಒಪ್ಪಿರಲಿಲ್ಲ. ಆ ನಂತರ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯ ನಿರ್ದೇಶನವನ್ನು ಅನುಸರಿಸಿ, ನಾವು ಈ ಪ್ರಕರಣವನ್ನು ಸ್ವೀಕರಿಸಿದ್ದೆವು” ಎಂದರು.ಸೋಂಕಿನಿಂದ ಮುಕ್ತವಾದ ಗರ್ಭಿಣಿ ಮಹಿಳೆಗೆ ಮಲ್ಲಿಗೆ ಹೂವು, ಹಣ್ಣು ಮತ್ತು ಸಿಹಿ ತಿನಿಸುಗಳನ್ನು ನೀಡಿ ಬೀಳ್ಕೊಡಾಲಾಗಿದೆ.
ಉಡುಪಿ ಜಿಲ್ಲೆಯ ಮೂವರು ಕೊರೊನಾ ಸೋಂಕಿತರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಪಕ್ಕದ ಜಿಲ್ಲೆಯ ಮಹಿಳೆಯೂ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಯಾವುದೇ ಹೊಸ ಪಾಸಿಟಿವ್ ಪ್ರಕರಣ ಕಳೆದ 27 ದಿನಗಳಿಂದ ಪತ್ತೆಯಾಗಿಲ್ಲ ಎಂದು ಟಿಎಂಎ ಪೈ ಕೋವಿಡ್ ಆಸ್ಪತ್ರೆ ವೈದ್ಯ ಶಶಿಕಿರಣ್ ಮತ್ತು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಮಾಹಿತಿ ನೀಡಿದರು.