LATEST NEWS
ಉಡುಪಿ – ಹೊಸವರ್ಷಾಚರಣೆ ರಾತ್ರಿ 10 ಗಂಟೆಗೆ ಡಿಜೆ ಬಂದ್…ಸಾರ್ವಜನಿಕರಿಗೆ ಮತ್ತು ಸಂಘಟಕರಿಗೆ ಪೊಲೀಸ್ ಇಲಾಖೆಯಿಂದ ಸೂಚನೆ
ಉಡುಪಿ ಡಿಸೆಂಬರ್ 31: ಹೊಸವರ್ಷಾಚರಣೆ ಸಂದರ್ಭ ರಾತ್ರಿ 10 ಗಂಟೆಗೆ ಡಿಜೆ ಸೇರಿದಂತೆ ಧ್ವನಿವರ್ದಕಗಳನ್ನು ಬಂದ್ ಮಾಡುವಂತೆ ಉಡುಪಿ ಪೊಲೀಸ್ ಎಸ್ಪಿ ಸಾರ್ವಜನಿಕರಿಗೆ ಹಾಗೂ ಸಂಘಟಕರಿಗೆ ಸೂಚಿಸಿದ್ದಾರೆ.
ಹೊಸ ವರ್ಷ ಆಚರಿಸಲು ಕಾರ್ಯಕ್ರಮ ಆಯೋಜಕರಿಗೆ ಮಧ್ಯರಾತ್ರಿ 12.30 ರವರೆಗೆ ಅವಕಾಶ ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾತ್ರಿ 10 ಗಂಟೆಯಿಂದ ಧ್ವನಿ ವರ್ಧಕ ಬಳಸಲು ಅವಕಾಶ ಇರುವುದಿಲ್ಲ. ಆದ್ದರಿಂದ ರಾತ್ರಿ 10 ರ ಬಳಿಕ ಕಡ್ಡಾಯವಾಗಿ ಡಿಜೆ ಹಾಗೂ ಇನ್ನಿತರ ಸಂಗೀರ ಪರಿಕರಗಳ ಬಳಕೆಗೆ, ಮ್ಯೂಸಿಕ್ ಬಳಸಿ ನಡೆಸುವ ಮನೋರಂಜನೆಗಳಿಗೆ ನಿಷೇಧವಿರುತ್ತದೆ. ಆದರೆ, ಧ್ವನಿವರ್ಧಕ ಇಲ್ಲದೆ ಅಥವಾ ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಡಿ.31ರ ರಾತ್ರಿ ವೇಳೆ ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಬೀಚ್‌ನಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆ, ಕಳ್ಳತನ, ಅಸಭ್ಯ ವರ್ತನೆಗಳು ಕಂಡುಬಂದರೆ ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇದಕ್ಕೆ ತಕ್ಷಣವೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲು ಆಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಅನೈತಿಕ ಪೊಲೀಸ್‌ಗಿರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ವಿಶೇಷ ತಂಡವನ್ನು ರಚಿಸಲಾಗದೆ. ಯಾವುದೇ ವ್ಯಕ್ತಿಗಳ ಬಗ್ಗೆ ಸಂಶಯ ಇದ್ದರೆ ತಾವೇ ನೇರವಾಗಿ ಹೋಗಿ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಬೇಕು. ಬಳಿಕ ಅದನ್ನು ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.