LATEST NEWS
ಉಡುಪಿ ನೇಜಾರು ಹತ್ಯಾಕಾಂಡ ಪ್ರಕರಣ, ಮುಂದಿನ ವಿಚಾರಣೆಗೆ ಆರೋಪಿಯನ್ನು ಭದ್ರತೆಯೊಂದಿಗೆ ಕೋರ್ಟಿಗೆ ಹಾಜರು ಪಡಿಸಲು ಆದೇಶ
ಉಡುಪಿ : ತಾಯಿ ಮತ್ತು ಮೂವರು ಮಕ್ಕಳನ್ನು ನಿರ್ದಯವಾಗಿ ಕೊಲೆ ಮಾಡಿದ ನೇಜಾರು ಹತ್ಯಾಕಾಂಡ ಪ್ರಕರಣದ ವಿಚಾರಣೆ ಉಡುಪಿಯ ಸತ್ರ ನ್ಯಾಯಾಲಯದಲ್ಲಿ ಗುರುವಾರದಂದು ನಡೆದಿದ್ದು ಕೊಲೆ ಆರೋಪಿ ಏರ್ ಇಂಡಿಯಾದ ಮಾಜಿ ಉದ್ಯೋಗಿ ಪ್ರವೀಣ್ ಚೌಗಲೆ(praveen chougule) ಯನ್ನು ಭದ್ರತಾ ಕಾರಣದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಯಿತು.
ಮುಂದಿನ ವಿಚಾರಣೆಯ ದಿನಾಂಕದವರೆಗೆ ಆರೋಪಿಯ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ. ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಲಿದ್ದು ಸಾಕ್ಷಿಗಳಿಗೆ ಸಮನ್ಸ್ ನೀಡಲು ಆದೇಶಿಸಿದೆ. ಸಂತ್ರಸ್ಥರ ಪರ ವಿಶೇಷ ಅಭಿಯೋಜಕರಾದ ಶಿವಪ್ರಸಾದ್ ಆಳ್ವ ವಾದ ಮಂಡಿಸಿ ಆರೋಪಿಯ ಗುರುತಿಸುವಿಕೆಯ ಪ್ರಕ್ರಿಯೆಗಾಗಿ ಭೌತಿಕ ಹಾಜರಾತಿ ಅಗತ್ಯವಿದ್ದು, ಆರೋಪಿಯನ್ನು ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಕೋರಿದರು.
ನ್ಯಾಯಾಲಯ ಇದಕ್ಕೆ ಸಮ್ಮತಿ ಸೂಚಿಸಿ ಮಲ್ಪೆ ಠಾಣೆಯ ಇನ್ಸ್ ಪೆಕ್ಟರಿಗೆ ಅಗತ್ಯ ಭದ್ರತೆಯೊಂದಿಗೆ (ಎಸ್ಕಾರ್ಟ್) ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ನಿರ್ದೇಶನ ನೀಡಿತು. ಮುಂದಿನ ವಿಚಾರಣೆ ನವೆಂಬರ್ 20 ರಂದು ಮುಂದೂಡಲಾಯಿತು.