LATEST NEWS
ನರಹಂತಕನಿಗೆ ಜೀವ ಬೆದರಿಕೆ ಪರಪ್ಪರ ಅಗ್ರಹಾರಕ್ಕೆ ಸ್ಥಳಾಂತರಗೊಂಡ ಪ್ರಮೀಣ್ ಚೌಗಲೆ
ಉಡುಪಿ ಡಿಸೆಂಬರ್ 01: ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಂದು ಪೊಲೀಸ್ ಕೈಗೆ ಸಿಕ್ಕಿಬಿದ್ದಿರುವ ನರಹಂತಕನನ್ನು ಇದೀಗ ಜೈಲಿನಲ್ಲಿ ಇಡುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆ ಉಡುಪಿ ಸಬ್ ಜೈಲಿನಿಂದ ಆರೋಪಿ ಪ್ರವೀಣ್ ಚೌಗಲೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ.
ದೀಪಾವಳಿಯ ದಿನ ಉಡುಪಿಯ ನೇಜಾರಿನಲ್ಲಿ ನಾಲ್ವರನ್ನು ಹಾಡಹಗಲೇ ಕೊಂದ ಆರೋಪಿ ಪ್ರವೀಣ್ ಚೌಗಲೆಗೆ ಜೀವ ಭಯ ಉಂಟಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಈತನನ್ನು ಉಡುಪಿಯ ಸಬ್ ಜೈಲಿಗೆ ರವಾನಿಸಲಾಗಿತ್ತು. ಆದರೆ ಈ ಜೈಲಿನಲ್ಲಿ ಈತನಿಗೆ ಭದ್ರತೆ ನೀಡುವುದು ಸವಾಲಾಗಿದೆ. ಸಹಕೈದಿಗಳೇ ಈ ಪಾಪಿಯನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುವ ಸಾಧ್ಯತೆ ಇದೆ. ಸೀಮಿತ ವ್ಯವಸ್ಥೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸುವುದು ಕಷ್ಟಸಾಧ್ಯ. ಹಾಗಾಗಿ ಸದ್ಯ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಡಿಸೆಂಬರ್ 5ರ ತನಕ ಈತನಿಗೆ ನ್ಯಾಯಾಂಗ ಬಂಧನವಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಈ ನಡುವೆ ಸಮಾಜದ ಗಣ್ಯರು, ಧರ್ಮ ಗುರುಗಳು, ರಾಜಕಾರಣಿಗಳು ಪ್ರತಿದಿನ ಎಂಬಂತೆ ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ, ಧೈರ್ಯ ಹೇಳಲು ಬರುತ್ತಿದ್ದಾರೆ. ಮೊದಲೇ ಆಘಾತದಲ್ಲಿರುವ ಕುಟುಂಬ ಈ ನಿರಂತರ ಭೇಟಿಯಿಂದ ಸುಸ್ತಾಗಿದೆ.ಬಂದವರಿಗೆ ಘಟನೆಯನ್ನು ವಿವರಿಸುತ್ತಾ ನೊಂದ ಕುಟುಂಬದ ಯಜಮಾನ ನೂರ್ ಮಹಮ್ಮದ್ ಅವರಿಗೆ ದುಃಖ ಮತ್ತಷ್ಟು ಜಾಸ್ತಿಯಾಗುತ್ತಲೇ ಇದೆ. ಆರೋಪಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ಆಗಬೇಕು ಮತ್ತು ಈ ಪ್ರಕರಣದ ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕವಾಗಬೇಕು ಅನ್ನೋ ಕುಟುಂಬದ ಒತ್ತಾಯಕ್ಕೆ ಸರಕಾರ ಸ್ಪಂದಿಸಬೇಕಾಗಿದೆ.