LATEST NEWS
ಆರೋಪಿ ಪ್ರವೀಣ್ ಬಂದಿದ್ದು ಅಯ್ನಾಝ್ ಕೊಲೆ ಮಾಡಲು…ಈ ವೇಳೆ ತಡೆಯಲು ಬಂದ ಉಳಿದವರನ್ನು ಕೊಲೆ ಮಾಡಿದ್ದ – ಉಡುಪಿ ಎಸ್ಪಿ
ಉಡುಪಿ ನವೆಂಬರ್ 15: ಉಡುಪಿ ಜಿಲ್ಲೆಯ ನೇಜಾರು ನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎಸ್ .ಪಿ ಡಾ. ಅರುಣ್ ಕೆ. ಸುದ್ದಿಗೋಷ್ಟಿ ನಡೆಸಿದ್ದು ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಪಿ ಪ್ರವೀಣ್ ಅರುಣ್ ಚೌಗುಲೆ ಮಹಾರಾಷ್ಟ ಮೂಲದ ಸಾಂಗ್ಲಿಯವರಾಗಿದ್ದು, ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಎರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಹೇಳಿದರು. ಕೊಲೆಗೆ ಕಾರಣ ಏನು ಎಂಬುದನ್ನು ವಿಚಾರಣೆಯಲ್ಲಿ ಪಡೆದುಕೊಳ್ಳುತ್ತೇವೆ. ಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಗಳಿವೆ.
ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೋಪ್ಪಿಗೆ ಕೊಟ್ಟಿದ್ದಾನೆ. ಆರೋಪಿ ಉದ್ದೇಶ ಅಯ್ನಾಝ್ ಎಂಬಾಕೆಯನ್ನು ಕೊಲೆ ಮಾಡುವುದಾಗಿತ್ತು. ಆದರೆ ಕೊಲೆ ಮಾಡುವ ವೇಳೆ ಮನೆಯವರು ಅಡ್ಡ ಬಂದಿದ್ದಕ್ಕೆ ಅವರನ್ನು ಕೊಲೆ ಮಾಡಿದ್ದಾನೆ. ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯ ನಾಶ ಮಾಡುವ ಸಲುವಾಗಿ ಎಲ್ಲರನ್ನೂ ಕೊಲೆ ಮಾಡಿರುವ ಬಗ್ಗೆ ತಪ್ಪೋಪ್ಪಿಗೆ ನೀಡಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿತ್ತು. ಸದ್ಯ ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮಾಡಿ ಬಂಧಿಸಿದ್ದೇವೆ. ಕೋರ್ಟ್ ಗೆ ಇವತ್ತೇ ಹಾಜರು ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ಪ್ರವೀಣ್ ಚೌಗುಲೆ ಕೋರ್ಟ್‌ಗೆ ಹಾಜರು:
ಈ ಮಧ್ಯೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಅವರನ್ನು ಉಡುಪಿ ಒಂದನೇ ಹೆಚ್ಚುವರಿ ನ್ಯಾಯಾಯಲಯ ಮುಂದೆ ಹಾಜರು ಪಡಿಸಲಾಗಿದ್ದು ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ 14 ದಿನ ಪೊಲೀಸ್ ಕಸ್ಟಡಿ ನೀಡಿ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆದೇಶ ಹೊರಡಿಸಿದ್ದಾರೆ.