DAKSHINA KANNADA
ಉಡುಪಿ : ಹೆದ್ದಾರಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮೊರೆಚ ಹೋದ ಕರಾವಳಿಯ ಸಂಸದರು..!
ಉಡುಪಿ: ಕರಾವಳಿಯ ರಾಷ್ಟ್ರೀಯ ಹೆದ್ದಾರಿಗಳ ಸುದೀರ್ಘ ಸಮಸ್ಯೆಗಳ ಪರಿಹಾರಕ್ಕಾಗಿ ಕರಾವಳಿಯ ಸಂಸದರು ಇದೀಗ ಕೇಂದ್ರ ಸಚಿವರಾದ ನಿತಿ ಗಡ್ಕರಿ ಅವರ ಮೊರೆ ಹೋಗಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ನೀಯೋಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಶಾಶ್ವತ ಪರಿಹಾರಕ್ಕಾಗಿ ಮನವಿ ಮಾಡಿದರು.
ಕರಾವಳಿ ಭಾಗದ ಪ್ರಮುಖ ರಾಷ್ಟ್ರೀಯ ಹೆದ್ದಾರಿ NH 66 ರ ಮೂಲ ನಕ್ಷೆಯಲ್ಲಿ ಅನೇಕ ಲೋಪಗಳಿದ್ದು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಂಗಳೂರು ನಗರದ ನಂತೂರು ಜಂಕ್ಷನ್ , ಉಡುಪಿಯ ಅಂಬಲಪಾಡಿಯ ಮೇಲ್ಸೇತುವೆ, ಕಟಪಾಡಿ, ಬ್ರಹ್ಮಾವರದ ಆಕಾಶವಾಣಿಯ ತಿರುವಿನ ಅಂಡರ್ ಪಾಸ್ ನ ಸಮಸ್ಯೆಗಳ ಬಗ್ಗೆ ಉನ್ನತ ಮಟ್ಟದ ತಜ್ಞ ಇಂಜಿನಿಯರ್ ಗಳ ಸಮಿತಿ ರಚಿಸಿ ಅಧ್ಯಯನ ನಡೆಸಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ನಿರ್ಮಾಣಗಳನ್ನು ಪುನರ್ ನಿರ್ಮಿಸಬೇಕೆಂದು ಮನವಿ ಮಾಡಿದರು.
ಸಂಸದರ ಮನವಿಗೆ ಸ್ಪಂದಿಸಿದ ನಿತಿನ್ ಗಡ್ಕರಿ ಅವರು ಅಪಘಾತಗಳು ಸೇರಿದಂತೆ ವಾಹನ ಒತ್ತಡಗಳ ಸ್ಥಳವನ್ನು ಪರಿಶೀಲಿಸಿ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬ್ರಹ್ಮಾವರ, ಕೋಟ, ಕುಂದಾಪುರ ರಸ್ತೆ ದುರಸ್ತಿಯ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಯಿತು. ಕಲ್ಯಾಣಪುರ – ಸಂತೆಕಟ್ಟೆ ಮತ್ತು ಮಣಿಪಾಲದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಚುರುಕಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ರಾಜ್ಯ ಮತ್ತು ಕರಾವಳಿ ರಸ್ತೆಗಳ ಸುಧಾರಣೆಗಾಗಿ (CRF) ಸೆಂಟ್ರಲ್ ರೋಡ್ ಫಂಡ್ ನಿಂದ ಅನುದಾನ ನೀಡುವುದಾಗಿ ಸಚಿವರು ಇದೇ ಸಂದರ್ಭ ಭರವಸೆ ನೀಡಿದರು.