LATEST NEWS
ಕೋಟಿ ಕೋಟಿ ಹಣ ವಂಚಿಸಿದ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಲಕ್ಷ್ಮೀನಾರಾಯಣ ಉಪಾಧ್ಯಾಯ ಬಂಧನ ಅರೆಸ್ಟ್

ಉಡುಪಿ ಡಿಸೆಂಬರ್ 29: ಠೇವಣಿದಾರರಿಗೆ ನೂರಾರು ಕೋಟಿ ಹಣ ವಂಚಿಸಿ ಪರಾರಿಯಾಗಿದ್ದ ಕಮಲಾಕ್ಷಿ ವಿವಿದೋದ್ದೇಶ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಬಿ.ವಿ ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರನ್ನು ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುಮಾರು 600 ಠೇವಣಿದಾರರ 93 ಕೋಟಿ ರುಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪ ಲಕ್ಷ್ಮೀನಾರಾಯಣ ಅವರ ಮೇಲೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ಠೇವಣಿದಾರರು ಬ್ಯಾಂಕ್ ನಲ್ಲಿ ಹಣಕ್ಕಾಗಿ ಗಲಾಟೆ ಮಾಡಿದ್ದರು, ಈ ವೇಳೆ ಬ್ಯಾಂಕ್ ನ ನಿರ್ದೇಶಕ ಬಿ.ವಿ ಲಕ್ಷ್ಮೀನಾರಾಯಣ ಉಪಾಧ್ಯಾಯ ತಲೆ ಮರೆಸಿಕೊಂಡಿದ್ದರು, ಇದೀಗ ಅವರನ್ನು ಪೊಲೀಸರು ಬಂಧಿಸಿ ಉಡುಪಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನ್ಯಾಯಲಯ ಜನವರಿ 11ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಜನವರಿ 2ನೇ ತಾರೀಖಿಗೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಪಿ ಪರ ವಕೀಲ ಮಿತ್ರಕುಮಾರ್ ಶೆಟ್ಟಿ ಕೊರೋನಾದ ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಸೊಸೈಟಿಗೆ ಗ್ರಾಹಕರಿಂದ ಬರಬೇಕಾದ ಸಾಲದ ಹಣದ ಮೊತ್ತ ದೊಡ್ಡದಿದೆ. ಆ ಹಣ ವಸೂಲಿಯಾಗದ ಕಾರಣ ಈ ಸಮಸ್ಯೆಯಾಗಿದೆ. ಗ್ರಾಹಕರು ಯಾರು ಹೆದರಬೇಕಾದ ಅಗತ್ಯ ಇಲ್ಲ . ಆ ಹಣವನ್ನು ಕೊಡುತ್ತೇನೆ ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ . ವೈಯಕ್ತಿಕ ಆಸ್ತಿ ಗಳನ್ನು ಮಾರಿಯಾದರೂ ದುಡ್ಡು ಕೊಡುತ್ತೇನೆ ಎಂದಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಇತರ ಯಾವುದರಲ್ಲೂ ಅವರು ಹೂಡಿಕೆ ಮಾಡಿಲ್ಲ . ಅವರಿಗೆ ಬರಬೇಕಾದ ಹಣ ಇದೆ ಅವರು ಕೊಡಬೇಕಾದ ಹಣ ಇದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.