LATEST NEWS
ಅಕ್ರಮ ನಿರ್ಮಾಣದ ನೆಪ – ಮೀನುಗಾರರ ನಿರ್ಮಾಣ ಹಂತದ ಶೆಡ್ ಮೇಲೆ ಜೆಸಿಬಿ ಕಾರ್ಯಾಚರಣೆ

ಉಡುಪಿ ಅಗಸ್ಟ್ 27: ಬಡ ಮೀನುಗಾರ ಮಹಿಳೆಯರಿಗೆ ರಕ್ಷಣೆ ನೀಡುತ್ತಿದ್ದ ತಾತ್ಕಾಲಿಕ ಶೆಡ್ ನ್ನು ನಿರ್ಮಾಣ ಹಂತದಲ್ಲಿರುವಾಗಲೇ ಉಡುಪಿ ನಗರಸಭೆ ಕೆಡವಿ ಹಾಕಿದೆ. ನಗರಸಭೆಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಿನ್ನಿಮೂಲ್ಕಿ ಬಳಿಯ ಸುಂದರ ಸ್ವಾಗತ ಗೋಪುರ ಪಕ್ಕದಲ್ಲಿ ಕಳೆದ ನಾಲ್ಕು ದಶಕಗಳಿಂದ ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದರು. ಈ ನಡುವೆ ಸ್ಥಳೀಯ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಸ್ವಂತ ಖರ್ಚಿನಲ್ಲಿ ಶೆಡ್ ನಿರ್ಮಿಸಿದ್ದರು. ಕಳೆದ ಎರಡು ಮೂರು ದಿನಗಳಿಂದ ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಇಂದು ಯಾವುದೇ ನೊಟೀಸು ನೀಡದೆ ಉಡುಪಿ ನಗರಸಭೆ ಅಧಿಕಾರಿಗಳು ಶೆಡ್ ಕಡವಿ ಹಾಕಿದ್ದಾರೆ.

ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ, ಹಾಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು, ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ನಗರಸಭಾ ಸದಸ್ಯೆ ತೀವ್ರ ಆಕ್ರೋಶ ಹೊರಹಾಕಿದರು. ನಗರಸಭಾ ಅಧಿಕಾರಿಯ ವಾಹನವನ್ನು ತೆರಳಲು ಅವಕಾಶವಿಲ್ಲದಂತೆ ತಡೆಗಟ್ಟಿದರು. ಉಡುಪಿನಗರ ಸಭಾ ವ್ಯಾಪ್ತಿಯಲ್ಲಿ ಅನೇಕ ಪ್ರತಿಷ್ಠಿತ ಮಳಿಗೆಗಳು ಅಕ್ರಮ ನಿರ್ಮಾಣ ಮಾಡಿವೆ. ಶ್ರೀಮಂತರಿಗೊಂದು, ಬಡವರಿಗೊಂದು ಕಾನೂನು ಯಾಕೆ ಎಂದು ಸಿಡಿಮಿಡಿಕೊಂಡರು. ಇದರಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪರಿಸರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಲ್ಪೆ ಪೊಲೀಸರು ನಗರಸಭಾ ಅಧಿಕಾರಿಯನ್ನು ಭದ್ರತೆ ನೀಡಿ ಸ್ಥಳದಿಂದ ಕರೆದೊಯ್ದರು.ಸಂತ್ರಸ್ತ ಮೀನುಗಾರ ಮಹಿಳೆಯರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ನಗರಸಭಾ ಸದಸ್ಯೆ ಮುಂದಾಗಿದ್ದಾರೆ.
https://youtu.be/CO4MuNHQ9CE