LATEST NEWS
ಉಡುಪಿಯಲ್ಲಿ ಆಶ್ಲೇಷ ಮಳೆ ಅಬ್ಬರ….!!

ಉಡುಪಿ ಅಗಸ್ಟ್ 06: ಉಡುಪಿ ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ ಜೋರಾಗಿದ್ದು. ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದೆ. ಕಾರ್ಮೋಡ ಮುಸುಕಿದ ವಾತಾವರಣ ಇದ್ದು, ಇನ್ನು ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಆಗಸ್ಟ್ 2 ರಿಂದ ಆಶ್ಲೇಷಾ ನಕ್ಷತ್ರ ಆರಂಭವಾಗಿದೆ. ಆಗಸ್ಟ್ ತಿಂಗಳ ಆರಂಭದಿಂದಲೇ ಅಲ್ಲಲ್ಲಿ ಗಾಳಿ ಜೊತೆ ಮುಂಗಾರು ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ 30 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಮೇ ಅಂತ್ಯದಲ್ಲಿ, ಜೂನ್ ತಿಂಗಳಲ್ಲಿ ಬಿತ್ತನೆ ಮತ್ತು ನಾಟಿ ಮಾಡಿದ್ದ ರೈತರಿಗೆ ಜುಲೈ ಅಂತ್ಯದ ಸಂದರ್ಭ ಆತಂಕ ಎದುರಾಗಿತ್ತು. ಮುಂಗಾರು ಮಳೆ ಮಾರುತಗಳು ಕ್ಷೀಣಿಸಿದ್ದು ಗದ್ದೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಸಮಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಬೇಸಾಯಗಾರರ ಮೊಗದಲ್ಲಿ ಸಂತಸ ಮೂಡಿದೆ.