LATEST NEWS
ಉಡುಪಿಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ರಕ್ಷಣೆಗೆ ಉತ್ತಮ ಸಹಕಾರ : ಗಣಪತಿ ಕೆ
ಉಡುಪಿ, ಜನವರಿ 9: ಉಡುಪಿ ಮತ್ತು ದ.ಕನ್ನಡ ಜಿಲ್ಲೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ರಕ್ಷಣೆಯಲ್ಲಿ ಅರಣ್ಯ ಇಲಾಖೆಗೆ ಸಾರ್ವಜನಿಕರು ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಇದರಿಂದ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಹೇಳಿದರು.
ಕಿದಿಯೂರು ಹೋಟೆಲ್ ನ ರೂಫ್ ಟಾಪ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ (ರಿ) ಉಡುಪಿ ಜಿಲ್ಲೆ ಇವರ ವತಿಯಿಂದ ವಾರ್ಷಿಕ ಸಮಾರಂಭ, ನೂತನ ವರ್ಷದ ಡೈರಿ ಬಿಡುಗಡೆ, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ, ರಕ್ತದಾನಿಗಳಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆ ಕಾರ್ಯವು ಕಷ್ಟಕರವಾಗಿದ್ದರೂ ಸಹ ಸಾರ್ವಜನಿಕರ ಸಹಕಾರದಿಂದ ಉಡುಪಿ ಮತ್ತು ದ.ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇವುಗಳ ರಕ್ಷಣಾ ಕಾರ್ಯವನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆಯಂತಹ ವನ್ಯಜೀವಿಗಳು ಕಂಡು ಬಂದರೂ ಸಹ , ಅವುಗಳು ಅಪಾಯಕಾರಿಯಾಗಿ ಸಾರ್ವಜನಿಕರಿಗೆ ತೊಂದರೆ ನೀಡುವ ಮುನ್ನವೇ, ಇಲಾಖೆಯ ಸಿಬ್ಬಂದಿಗಳು ಅಪಾಯವನ್ನೂ ಲೆಕ್ಕಿಸದೇ ತ್ವರಿತಗತಿಯಲ್ಲಿ ಕಾರ್ಯಚರಣೆ ನಡೆಸಿ, ತಕ್ಷಣದಲ್ಲಿ ಅವುಗಳನ್ನು ಸೆರೆಹಿಡಿಯುವ ಮೂಲಕ ವನ್ಯ ಜೀವಿ ಮತ್ತು ಮಾನವ ಸಂಘರ್ಷಗಳು ನಡೆಯುದಂತೆ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರ ಬೆಂಬಲ ಕೂಡಾ ಉತ್ತಮವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೆಟಾಲ್ಕರ್ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅತ್ಯಂತ ಶ್ಲಾಘನೀಯ ಕಾರ್ಯ , ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಅರಣ್ಯದ ಮಹತ್ವ, ಅದರ ಉಳಿವು ಮತ್ತು ಬೆಳವಣಿಗೆ ಮತ್ತು ರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಅವರ ಸಹಭಾಗಿತ್ವದಲ್ಲಿ ಅರಣ್ಯವನ್ನು ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕು. ಜಿಲ್ಲೆಯ ಉಪ ಉಪ ವಲಯ ಅರಣ್ಯಾಧಿಕಾರಿಗಳ ಸಂಘಕ್ಕೆ ಅಗತ್ಯವಿರುವ ನೂತನ ಸಭಾಭವನ ನಿರ್ಮಿಸುವ ಕುರಿತಂತೆ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವ ಮೂಲಕ ಶೀಘ್ರದಲ್ಲಿ ಅದರ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿಯ ಗೌರವ ಅಧ್ಯಕ್ಷ ಪ್ರಕಾಶ್ಚಂದ್ರ ಮಾತನಾಡಿ, ಸಂಘವು 23 ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಗ್ರಾಮೀಣ ಸಾಧಕರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ರಕ್ತದಾನಿಗಳನ್ನು ಸನ್ಮಾನಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.