LATEST NEWS
ಉಡುಪಿ – ವಿಷ ಹಾಕಿ ನಾಯಿ ಕೊಂದ ಆರೋಪ…ಹೂತಿದ್ದ ನಾಯಿ ದೇಹ ಹೊರತೆಗೆದು ಪೋಸ್ಟ್ ಮಾರ್ಟಂ

ಶಿರ್ವ ಫೆಬ್ರವರಿ 25: ಪ್ರೀತಿಯಿಂದ ಸಾಕಿದ್ದ ನಾಯಿ ಇದ್ದಕ್ಕಿದ್ದ ಹಾಗೆ ಸಾವನಪ್ಪಿದ ಹಿನ್ನಲೆ ಸಾಕುನಾಯಿಗೆ ಪಕ್ಕದ ಮನೆಯವರು ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದಾರೆ ಎಂದು ಆರೋಪಿಸಿ ಶ್ವಾನದ ಮಾಲೀಕರು ದೂರು ನೀಡಿರುವ ಹಿನ್ನೆಲೆಯಲ್ಲಿ, ತನಿಖೆಗಾಗಿ ಹೂತಿದ್ದ ನಾಯಿಯ ಕಳೇಬರವನ್ನು ಪೊಲೀಸರು ಮೇಲಕ್ಕೆತ್ತಿದ್ದಾರೆ. ಜಿಲ್ಲೆಯ ಕಾಪು ಮಣಿಪುರದ ಬಡಗು ಮನೆ ಬಳಿ ಈ ಬೆಳವಣಿಗೆ ನಡೆಯಿತು.
ಸಾಮಾಜಿಕ ಕಾರ್ಯಕರ್ತೆ, ಪ್ರಾಣಿಪ್ರಿಯೆ ಬಿಂದು ಎಂಬವರು ನಾಯಿಯನ್ನು ಸಾಕಿದ್ದರು. ಫೆಬ್ರವರಿ 21ರಂದು ನಾಯಿ ಇದ್ದಕ್ಕಿದ್ದ ಹಾಗೆ ಸಾವನಪ್ಪಿದೆ. ಈ ಹಿನ್ನಲೆ ಸಾಕು ನಾಯಿಯನ್ನು ಮನೆಯವರು ಅಂತ್ಯಕ್ರಿಯೆ ನಡೆಸಿದ್ದರು. ನಾಯಿಗೆ ವಿಷ ಬೆರೆಸಿ ಕೊಂದಿರುವ ಶಂಕೆ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದೇ ಬಿಂದು ಅವರು ಕಾಪು ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಗಾಗಿ ಹೂತಿದ್ದ ನಾಯಿಯ ಕಳೇಬರವನ್ನು ಹೊರತೆಗೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಯಿಯ ಕಳೇಬರ ಹೊರತೆಗೆಸಿ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ.

ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು. ಹೆಡ್ ಕಾನ್‌ಸ್ಟೇಬಲ್‌ಗಳಾದ ಅರುಣ್ ಉಪ್ಪರು, ಸುಧಾಕರ್ ನಾಯ್ಸ್, ಪ್ರಾಣಿ ದಯಾ ಸಂಘದ ಮಂಜುಳಾ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಗುಂಡಿಯಿಂದ ಮೇಲಕ್ಕೆತ್ತಲಾಯಿತು. ಪಶುವೈದ್ಯ ಡಾ.ಚಂದ್ರಕಾಂತ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.