LATEST NEWS
ಮತ ಏಣಿಕೆಗೆ ಉಡುಪಿ ಜಿಲ್ಲಾಡಳಿತ ಸಜ್ಜು

ಮತ ಏಣಿಕೆಗೆ ಉಡುಪಿ ಜಿಲ್ಲಾಡಳಿತ ಸಜ್ಜು
ಉಡುಪಿ, ಮೇ 14: ವಿಧಾನಸಭಾ ಚುನಾವಣೆ 2018 ಕ್ಕೆ ಸಂಬಂಧಿಸಿದಂತೆ, ಉಡುಪಿಯ ಕುಂಜಿಬೆಟ್ಟು ಟಿ.ಎ .ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದ್ದು, ಮೇ 15 ರಂದು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಮತ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಎಣಿಕೆ ಮೇಜು ಹಾಗೂ ಚುನಾವಣಾಧಿಕಾರಿಯವರಿಗೆ ಒಂದು ಮೇಜು ವ್ಯವಸ್ಥೆ ಮಾಡಲಾಗಿದೆ, ಮತ ಎಣಿಕೆ ಪ್ರಕ್ರಿಯೆಗಾಗಿ 90 ಎಣಿಕೆ ಮೇಲ್ವಿಚಾರಕರು, 90 ಎಣಿಕೆ ಸಹಾಯಕರು, 90 ಮೈಕ್ರೋ ಅಬ್‍ಸರ್ವರ್ ಹಾಗೂ ಟಾಬುಲೇಷನ್, ಫಲಿತಾಂಶದ ವಿವರ ಕ್ರೂಢೀಕರಿಸಲು ಇತ್ಯಾದಿ ಕೆಲಸಗಳಿಗಾಗಿ 30 ಸಿಬ್ಬಂದಿ ಸೇರಿದಂತೆ ಒಟ್ಟು 300 ಅಧಿಕಾರಿ/ಸಿಬ್ಬಂದಿ ನೇಮಿಸಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಹಾಗೂ ಕೇಂದ್ರದ ಬಳಿ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ, ಪ್ರತಿ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ನಡೆಯುತ್ತಿದ್ದಂತೆ ಪ್ರತಿ ಸುತ್ತುವಾರು ಅಭ್ಯರ್ಥಿಗಳು ಗಳಿಸಿದ ಮತಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ, ಅಂತಿಮ ಸುತ್ತಿನ ವಿವರ ಪ್ರಕಟಿಸಿ, ಚುನಾವಣಾಧಿಕಾರಿ ವಿಜೇತ ಅಭ್ಯರ್ಥಿಯ ಘೋಷಣೆಯನ್ನು ಅಧಿಕೃತವಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ ಎಣಿಕೆಯ ಕ್ಷಣಕ್ಷಣದ ಫಲಿತಾಂಶಕ್ಕಾಗಿ www.eciresults.nic.in ನ್ನು ಸಂಪರ್ಕಿಸಬಹುದು.
ಮೇ 14 ರ ರಾತ್ರಿ 12 ರಿಂದ ಮೇ 15 ರ ರಾತ್ರಿ 12 ರ ವರೆಗೆ ಮದ್ಯ ನಿಷೇಧ ದಿನವನ್ನಾಗಿ ಆದೇಶ ಹೊರಡಿಸಿದ್ದು, ಮೇ 15 ರ ಬೆಳಗ್ಗೆ 6 ಗಂಟೆಯಿಂದ ಮೇ 17 ರ ಬೆಳಗ್ಗೆ 6 ರ ವರೆಗೆ ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸಲಾಗಿದ್ದು, ಮೆರವಣಿಗೆ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.