LATEST NEWS
ಅನಧಿಕೃತ ಜಾನುವಾರುಗಳ ವಧೆ, ಸಾಗಾಣಿಕೆ ನಿಷೇಧ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ, ಜುಲೈ 9 : ಜಿಲ್ಲೆಯಲ್ಲಿ ಜುಲೈ 10 ರಂದು ಆಚರಿಸಲಾಗುವ ಬಕ್ರೀದ್ ಹಬ್ಬ ಆಚರಣೆಯ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆಯಡಿ ವಿವಿಧ ತಂಡಗಳನ್ನು ರಚಿಸಿ, ಕಣ್ಗಾವಲು ಇರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿಯಲ್ಲಿ, ಬಕ್ರೀದ್ ಹಬ್ಬ ಆಚರಣೆ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ರಚಿಸಿರುವ ಜಿಲ್ಲಾ ಸಮಿತಿಯೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಾದ್ಯಂತ ಇರುವ ಚೆಕ್ ಪೋಸ್ಟ್ಗಳಲ್ಲಿ ಅನಧಿಕೃತವಾಗಿ ಜಾನುವಾರುಗಳು ಸಾಗಾಣಿಕೆ ಆಗದಂತೆ ನಿಗಾ ಇರಿಸುವಂತೆ ಸೂಚಿಸಿದ ಅವರು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಿದರು.

ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಲ್ಲಿ ಅವುಗಳ ರಕ್ಷಣೆಗಾಗಿ ಗುರುತಿಸಿದ ಗೋಶಾಲೆಗಳಲ್ಲಿ ಸಂರಕ್ಷಣೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಗೋಹತ್ಯೆ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೋಲೀಸ್ ಠಾಣೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು. ಬಕ್ರಿದ್ ಹಬ್ಬದ ಧಾರ್ಮಿಕ ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಲೋಪವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ
ಅಧಿಕಾರಿಗಳಿಗೆ ಸೂಚಿಸಿದರು.