LATEST NEWS
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 89 ಲಕ್ಷ ವಸೂಲಿ – ಪೊಲೀಸರ ಕೈಗೆ ಸಿಕ್ಕಿದ ಸೈಬರ್ ಕ್ರಿಮಿನಲ್
ಉಡುಪಿ ಫೆಬ್ರವರಿ 03: ಉಡುಪಿಯ ಜ್ಯುವೆಲ್ಲರಿ ಮಾಲೀಕರೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ 89 ಲಕ್ಷ ವಂಚಿಸಿದ ಸೈಬರ್ ಕ್ರಿಮಿನಲ್ ನನ್ನು ಉಡುಪಿ ಪೊಲೀಸರು ಧಾರವಾಡದಲ್ಲಿ ಅರೆಸ್ಟ್ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ್ ನಿವಾಸಿ ಕಿರಣ್ (24) ಬಂಧಿತ ಆರೋಪಿ. ಬಂಧಿತನಿಂದ ಒಟ್ಟು ಏಳು ಲಕ್ಷ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿಯ ಜ್ಯುವೆಲ್ಲರಿ ಅಂಗಡಿ ಮಾಲಕ ಕನ್ನಾರ್ ಸಂತೋಷ ಕುಮಾರ್(45) ಎಂಬವರಿಗೆ ಸೆಪ್ಟೆಂಬರ್ 11ರಂದು ಅಪರಿಚಿತರು ಕರೆ ಮಾಡಿ, ಅಕ್ರಮ ಜಾಹೀರಾತು, ಸಂದೇಶ ಕಳುಹಿಸುವುದಕ್ಕೆ ನಿಮ್ಮ ಮೇಲೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ನಿಮ್ಮ ಮೇಲೆ ಅರೆಸ್ಟ್ ವಾರಂಟು ಆಗಿರುವುದಾಗಿ ಬೆದರಿಸಿದರು.
ನಂತರ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ವಾಟ್ಸಪ್ ವಿಡಿಯೋ ಕರೆ ಮಾಡಿ, ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಭಾಗಿಯಾಗಿ ರುವುದಾಗಿ ತಿಳಿಸಿ ಆದಾಯದ ಮೂಲ ಪರಿಶೀಲನೆ ಮಾಡುವುದಾಗಿ ಹೇಳಿ, ವರ್ಚುವಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿದರು. ಅದರಂತೆ ಸಂತೋಷ್ ಕುಮಾರ್ ಬೆದರಿಸಿ ಅವರಿಂದ 89,00,000ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ಎಸಗಿದ್ದರು. ಈ ಬಗ್ಗೆ ಸಂತೋಷ ಕುಮಾರ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ತಂಡವು ಕೇರಳ ರಾಜ್ಯ ಮತ್ತು ಮಹಾರಾಷ್ಟ ರಾಜ್ಯದ ಪುಣೆ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಕಿರಣ್‌ನನ್ನು ಧಾರವಾಡದಲ್ಲಿ ಬಂಧಿಸಿ, ಒಂದು ಮೊಬೈಲ್ ಫೋನ್ ಹಾಗೂ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿತು.