LATEST NEWS
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆ ಹಾಗೂ ಅಸಮತೋಲನವನ್ನು ನಿವಾರಿಸಿದರು: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಆಗಸ್ಟ್ 31 : ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮತೋಲನಗಳನ್ನು ಶಾಂತಿಯ ಮೂಲಕ ಕ್ರಾಂತಿಯ ಬದಲಾವಣೆಯನ್ನು ತರುವ ಕೆಲಸವನ್ನು ಬ್ರಹ್ಮ ಶ್ರೀ ನಾರಾಯಣ ಗುರು ರವರು ಮಾಡಿದರು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಇಂದು ನಗರದ ಬನ್ನಂಜೆ ಶ್ರೀ ನಾರಾಯಣ ಗುರು ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಲ್ಲವರ ಸೇವಾ ಸಂಘ ಉಡುಪಿ (ರಿ) ಬನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ, ಸಮಬಾಳು-ಸಮಪಾಲು ಲಭಿಸಬೇಕೆಂಬ ಪರಿಕಲ್ಪನೆಯೊಂದಿಗೆ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬ್ರಹ್ಮಶ್ರೀ ನಾರಾಯಣ ಗುರು ದೊಡ್ಡ ಕ್ರಾಂತಿಯನ್ನೇ ಶಾಂತಿಮಾರ್ಗದಲ್ಲಿ ರಕ್ತಕ್ರಾಂತಿ ಇಲ್ಲದೇ ಮಾಡುವುದರೊಂದಿಗೆ ಸಮಾಜದಲ್ಲಿ ಸುಧಾರಣೆಯನ್ನು ತಂದಿದ್ದಾರೆ ಎಂದರು. ಸ್ವಾಮೀ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದಾಗ, ಅಲ್ಲಿನ ಮನುಷ್ಯತ್ವ ಇಲ್ಲದ ವಾತಾವರಣವನ್ನು ನೋಡಿ, ಇದನ್ನು ಸರಿ ಮಾಡಲು ಸಾಧ್ಯವೇ ಎಂದಿದ್ದರು. ಅಂತಹ ಪ್ರದೇಶದಲ್ಲಿ ನಾರಾಯಣ ಗುರುಗಳು ಶಾಂತಿಯ ಕ್ರಾಂತಿಯೊಂದಿಗೆ ಸಾಮಾಜಿಕ ಬದಲಾವಣೆಯನ್ನು ತಂದರು ಎಂದರು.
ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶವನ್ನು ಸಾರುವ ಕೆಲಸ ಮಾಡುತ್ತಿದೆ. ಅಲ್ಲದೇ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾರಾಯಣ ಗುರುಗಳ ನಿಗಮವನ್ನು ಸ್ಥಾಪಿಸಿದೆ. ಸಮುದಾಯಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲು ಅನುದಾನವನ್ನು ಮಾನ್ಯ ಮುಖ್ಯಮಂತ್ರಿ ಒದಗಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಮಾತನಾಡಿ, ಸಮಾಜದಲ್ಲಿ ಮೇಲು-ಕೀಳೂ ಬಿಟ್ಟು ಒಂದೇ ಜಾತಿ, ಒಂದೇ ಮತ ಎಂಬ ಸಂದೇಶವನ್ನು ಬ್ರಹ್ಮಶ್ರೀ ನಾರಾಯಣ ಗುರು ಅವರು, ಸಾರುವ ಮೂಲಕ ಒಂದೇ ಮನುಕುಲ ಎಂಬ ಮೌಲ್ಯವನ್ನು ತಿಳಿಸಿರುತ್ತಾರೆ. ಇವರ ಆದರ್ಶಗಳು ಹಾಗೂ ತತ್ವಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸ ನೀಡಿ, ದಾರ್ಶನಿಕ, ಆಧ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕಾಗಿ ಮುಂದಾದರು, ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿದ್ದರು. ಇವುಗಳ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಶತಮಾನಗಳ ಹಿಂದೆ ಆಂಗ್ಲ, ಸಂಸ್ಕೃತ ಶಾಲೆಗಳನ್ನು ಆರಂಭಿಸಿದರು. ಬಾಲ್ಯ ವಿವಾಹ, ಬಹುಪತ್ನಿತ್ವ ಸೇರಿದಂತೆ ಮತ್ತಿತರ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದರು. ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ರವರ ತತ್ವ, ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಿ, ಅವರುಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಮುಂದಿನ ದಿನಗಳಲ್ಲಿ, ಸಮಾಜ ಸುಧಾರಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನ ಪ್ರಶಸ್ತಿ ಪ್ರಧಾನ ಮಾಡಬೇಕೆಂದು ಸಲಹೆ ನೀಡಿದರು.