LATEST NEWS
ಕಸ ವಿಂಗಡಿಸಿ ಅಂದಿದ್ದಕ್ಕೆ ಪೌರ ಕಾರ್ಮಿಕನಿಗೆ ನಡು ರಸ್ತೆಯಲ್ಲೆ ಹಲ್ಲೆ
ಉಡುಪಿ ಮಾರ್ಚ್ 12: ಕಸ ತೆಗೆಯಲಪ ಬಂದ ಪೌರಕಾರ್ಮಿಕರಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಎಲೆಕ್ಟ್ರಾನಿಕ್ಸ್ ಅಂಗಡಿಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಘಟನೆ ಇಂದು ನಡೆದಿದೆ.
ಉಡುಪಿ ನಗರಸಭೆಯ ಆದೇಶದಂತೆ ಹಸಿ ಕಸ ಮತ್ತು ಒಣ ಕಸಗಳನ್ನು ವಿಂಗಡಣೆ ಮಾಡಿ ಇಡಬೇಕಾಗಿದ್ದು, ಕಸ ವಿಲೇವಾರಿಗೆ ಬರುವ ಪೌರಕಾರ್ಮಿಕರು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಉಡುಪಿ ಸಿಟಿಬಸ್ ನಿಲ್ದಾಣದ ಬಳಿ ಇರುವ ಎಲೆಕ್ಟ್ರಾನಿಕ್ಸ್ ಅಂಗಡಿಯವರು ಮಾತ್ರ ಹಸಿಕಸ ಮತ್ತು ಒಣ ಕಸವನ್ನು ವಿಂಗಡಣೆ ಮಾಡದೇ ಹಾಗೆ ಇಟ್ಟಿದ್ದರು. ಇದನ್ನು ಕಸ ತೆಗೆಯಲು ಬಂದ ಪೌರ ಕಾರ್ಮಿಕರು ಪ್ರಶ್ನೆ ಮಾಡಿದಕ್ಕೆ ಅಂಗಡಿಯ ಸಿಬ್ಬಂದಿಗಳು ಕೋಪಗೊಂಡು ಈ ಕಸವನ್ನು ನಿನಗೆ ಕೊಂಡೋಗಲು ಏನಾಗುತ್ತದೆ ಎಂದು ಬೈದಿದ್ದು ಮಾತ್ರವಲ್ಲದೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಂತರ ಸ್ಥಳಕ್ಕೆ ಆಗಮಿಸಿದ ನಗರ ಸಭೆಯ ಅಧಿಕಾರಿ ಬಂದು ಮಾತನಾಡಿದ್ದು, ಈ ವೇಳೆ ಅಧಿಕಾರಿಗಳೊಂದಿಗೆ ಕೂಡಾ ಅಂಗಡಿ ಸಿಬ್ಬಂದಿಗಳು ದರ್ಪದಿಂದ ವರ್ತಿಸಿದ್ದು ಮಾತ್ರವಲ್ಲದೆ ಅಧಿಕಾರಿಗಳ ಎದುರಲ್ಲೆ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಅಲ್ಲದೆ ಬೇಕಾದರೆ ಕೇಸು ದಾಖಲಿಸಿ ಏನಾಗುತ್ತದೆಂದು ನಾವು ನೋಡಿಕೊಳ್ಳುತ್ತೇವೆ ಎಂದು ದುರಹಂಕಾರದಿಂದ ವರ್ತಿಸಿದ್ದಾರೆ.