LATEST NEWS
ಯುಕೋ ಬ್ಯಾಂಕ್ 820 ಕೋಟಿ ಹಣ ವರ್ಗಾವಣೆ – ಮಂಗಳೂರು ಸೇರಿದಂತೆ ದೇಶದಾದ್ಯಂತ ಬ್ಯಾಂಕ್ ಮೇಲೆ ಸಿಬಿಐ ದಾಳಿ

ಮಂಗಳೂರು ಡಿಸೆಂಬರ್ 06: ಖಾಸಗಿ ಬ್ಯಾಂಕೊಂದರ 14 ಸಾವಿರ ಜನರ ಖಾತೆಯಿಂದ ಯುಕೋ ಬ್ಯಾಂಕ್‌ನ 41 ಸಾವಿರ ಜನರ ಖಾತೆಗೆ 820 ಕೋಟಿ ರೂಪಾಯಿ ಹಣ ವರ್ಗಾವಣೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು, ಕೋಲ್ಕತಾ ಸೇರಿದಂತೆ ದೇಶದ 13 ಸ್ಥಳಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿದೆ.
ಈ ಪ್ರಕರಣದಲ್ಲಿ ಇಬ್ಬರು ಎಂಜಿನಿಯರ್‌ಗಳು ಶಾಮೀಲಾದ ಶಂಕೆ ಇದೆ. ಹೀಗಾಗಿ ಖುದ್ದು ಯುಕೋ ಬ್ಯಾಂಕ್ ನೀಡಿದ ದೂರಿನ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ದಾಳಿ ಮಾಡಿದೆ. ದಾಳಿ ವೇಳೆ ಕಂಪ್ಯೂಟರ್, ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್, ಲ್ಯಾಪ್‌ಟಾಪ್, ಇ-ಮೇಲ್ ಆರ್ಕೈವ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದೆ.

ಅನುಮಾನಾಸ್ಪದ ಐಎಂಪಿಎಸ್ ವಹಿವಾಟಿನ ಆರೋಪದ ಮೇಲೆ ಬ್ಯಾಂಕ್‌ನ ಇಬ್ಬರು ಸಹಾಯಕ ಎಂಜಿನಿಯರ್‌ಗಳು ಮತ್ತು ಇತರ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಖಾಸಗಿ ಬ್ಯಾಂಕ್ ಖಾತೆದಾರರ 14,000 ಖಾತೆಗಳಿಂದ ಯುಕೊ ಬ್ಯಾಂಕ್ ನ 41,000 ಬ್ಯಾಂಕ್ ಖಾತೆಗಳಿಗೆ ಆಂತರಿಕ ಐಎಂಪಿಎಸ್ ವಹಿವಾಟಿನ ಮೂಲಕ ನವೆಂಬರ್ 10-13ರವರೆಗೆ 820 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತಮ್ಮ ಬ್ಯಾಂಕ್ ಖಾತೆಗಳಲ್ಲಿ ಇದ್ದಕ್ಕಿದ್ದ ಹಾಗೆ ಮೊತ್ತವನ್ನು ನೋಡಿದ ಕೆಲವು ಖಾತೆದಾರರು ಅದನ್ನು ಹಿಂಪಡೆದಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಮಾಹಿತಿ ನೀಡಿದೆ.