DAKSHINA KANNADA
ಬಂಟ್ವಾಳ – ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಇಬ್ಬರು ಅಧಿಕಾರಿಗಳು

ಬಂಟ್ವಾಳ ಮೇ 14: ಮೃತಪಟ್ಟ ತನ್ನ ಗಂಡನ ಮರಣ ಉಪದಾನ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಒಡ್ಡಿ ಲಂಚ ಸ್ವೀಕರಿಸುವ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ದೂರುದಾರೆ ಮಹಿಳೆಯ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ನೊಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023ರ ಅಕ್ಟೋಬರ್ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಿರುತ್ತಾರೆ. ತದ ನಂತರ ಅವರ ಗಂಡ ಜೂನ್ 2024 ರಂದು ಮರಣ ಹೊಂದಿರುತ್ತಾರೆ.
ಬಳಿಕ ಮಹಿಳೆ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಶ್ರೀ ಭಾಸ್ಕರ್ ರವರ ಬಳಿ ಅವರ ಗಂಡನ ಮರಣ ಉಪದಾನದ ಬಗ್ಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರುವುದಿಲ್ಲ. ಸ್ವಲ್ಪ ಸಮಯದ ನಂತರ ದೂರದಾರೆ ಮಹಿಳೆಯ ಖಾತೆಗೆ ಗಂಡನ ಮರಣ ಉಪದಾನವನ್ನು ಜಮೆ ಮಾಡಿಕೊಟ್ಟಿರುವ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ರವರು ರೂ 5000/- ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್.ರವರ ರೂ 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಮಹಿಳೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಶ್ರೀ ಭಾಸ್ಕರ್ ರವರು ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೇಗೌಡ ರವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ದಿನ ದಿನಾಂಕ 14.05.2025 ರಂದು ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಶ್ರೀ ಭಾಸ್ಕರ್ ರವರು ಪಿರ್ಯಾದಿದಾರರಿಂದ ರೂ 5000/- ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್.ರವರು ರೂ 5000/- ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ ರವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ