BELTHANGADI
ನಶೆಯಲ್ಲಿ ಇಬ್ಬರ ಜೀವ ತೆಗೆದ ಪಿಕಪ್ ಚಾಲಕ

ಬೆಳ್ತಂಗಡಿ ನವೆಂಬರ್ 30: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಡಿಯ ಹುಣ್ಸೆಕಟ್ಟೆ ಎಂಬಲ್ಲಿ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಪಿಕಪ್ ವಾಹನದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳ್ತಂಗಡಿ ಕುಪ್ಪೆಟ್ಡಿಯ ಹುಣ್ಸೆಕಟ್ಟೆಎಂಬಲ್ಲಿ ಉರುವಾಲು ನಿವಾಸಿ ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಕಣಿಯೂರಿನ ಜಯರಾಮ್ ಗೌಡ ಎಂಬವರು ಬೈಕ್ ನಲ್ಲಿ ತಮ್ಮ ಮನೆ ಕಡೆಗೆ ಹೋಗುತ್ತಿರುವಾಗ ಪಿಕಪ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಸ್ಥಳೀಯರು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ತಕ್ಷಣ ಪಿಕಪ್ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅತನನ್ನು ಪರಿಶೀಲಿಸಲಾಗಿ ಆರೋಪಿ ಚಾಲಕ ಹರೀಶ(29) ಅಮಲು ಪದಾರ್ಥ ಸೇವಿಸಿರುವುದು ಕಂಡು ಬಂದಿತ್ತು, ಆತನ ವಿರುದ್ದ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ: 279, & ಕಲಂ: 134(ಎ) & (ಬಿ), 185 ಐಎಂವಿ ಕಾಯ್ದೆ ಹಾಗೂ ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಾಲನೆ ಮಾಡಿದರೆ ಇನ್ನೊಂದು ಜೀವಕ್ಕೆ ಹಾನಿ ಅಥವಾ ಮರಣ ಉಂಟಾಗಬಹುದು ಎಂಬ ಜ್ಞಾನವಿದ್ದು, ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯವೆಸಗಿರುವುದರಿಂದ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆಯ ಕಲಂ.304 ಐಪಿಸಿ ದಾಖಲಿಸಲಾಗಿದೆ.