LATEST NEWS
ಕಚ್ಚಾ ಬಾಂಬ್ ತಯಾರಿಸುತ್ತಿದ್ದ ಇಬ್ಬರ ಬಂಧನ..!

ಉಡುಪಿ : ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಬಳಿಯ ಹಾಡಿಯಲ್ಲಿ ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಚೆನ್ನಗಿರಿ ಮೂಲದ ಕಾಶಿನಾಥ ಜೆ.ಎಸ್.(30), ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಯಹೋ ಶಿವು(25) ಬಂಧಿತ ಆರೋಪಿಗಳು.

ಇವರು ಕಚ್ಚಾ ಬಾಂಬ್ ಸಾಗಾಟಕ್ಕೆ ಬಳಸಿದ 15 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಮತ್ತು 10 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅ.12ರಂದು ಕಾಡು ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಕಚ್ಚಿದ ಪರಿಣಾಮ ಸುಧೀರ್ ಪೂಜಾರಿ ಎಂಬವರ ಸಾಕು ನಾಯಿ ಸಾವನ್ನಪ್ಪಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಕ್ರಮ ಸ್ಫೋಟಕ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಅ.13ರಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಎಸ್ಪಿ ಡಾ.ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ ಪಿ.ಕೆ. ನಿರ್ದೇಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಬ್ರಹ್ಮಾವರ ಎಸ್ಸೈ ರಾಜಶೇಖರ ವಂದಲಿ, ಸಿಬ್ಬಂದಿ ಸುರೇಶ್ ಶೆಟ್ಟಿ, ಸಂತೋಷ ಶೆಟ್ಟಿ, ಪ್ರವೀಣ್ ಶೆಟ್ಟಿಗಾರ್, ವೆಂಕಟರಮಣ ದೇವಾಡಿಗ, ಮುಹಮ್ಮದ್ ಅಜ್ಮಲ್, ಸಂತೋಷ ರಾಠೋಡ್ ಮತ್ತು ದೀಲಿಪ್ ಈ ಕಾರ್ಯಾಚರಣೆ ನಡೆಸಿದ್ದರು.
ಘಟನಾ ಸ್ಥಳದಲ್ಲಿ ಉಡುಪಿ ಬಿ.ಡಿ.ಡಿ.ಎಸ್ ತಂಡ, ಸೀನ್ ಆಫ್ ಕ್ರೈಮ್ ಅಧಿಕಾರಿ ತಂಡ, ಮತ್ತು ಬ್ರಹ್ಮಾವರ ಪೊಲೀಸರು ಒಟ್ಟು 22 ಸಜೀವ ಕಚ್ಚಾ ಬಾಂಬ್‌ಗಳನ್ನು ಪತ್ತೆ ಮಾಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನ್ಯಾಯಾಲಯದ ಅನುಮತಿ ಮೇರೆಗೆ ಸಾರ್ವಜನಿಕರ ಸುರಕ್ಷತ ಹಾಗೂ ಭದ್ರತೆಯ ಹಿತದೃಷ್ಠಿಯಿಂದ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿತು.
ಬಂಧಿತ ಇಬ್ಬರು ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಇನ್ನಿತರ ಕಡೆ ಸ್ಥಳೀಯವಾಗಿ ಸಿಗುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಬಳಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದು, ಅದನ್ನು ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಭಾಗಗಳಲ್ಲಿ ಕಾಡು ಹಂದಿಗಳ ಬೇಟೆಗೆ(ಶಿಕಾರಿಗೆ) ಬಳಕೆ ಮಾಡುತ್ತಿ ದ್ದಾರೆನ್ನಲಾಗಿದೆ.
ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆ ಬ್ರಹ್ಮಾವರ ಮತ್ತು ಕೋಟ ಭಾಗದಲ್ಲಿ ಕಚ್ಚಾ ಬಾಂಬ್ ಬಳಸಿ ಕಾಡುಹಂದಿ ಶಿಕಾರಿ ಮಾಡಿರುವ ಸಂಶಯವಿರುವ ಕಾರಣ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.