LATEST NEWS
ಈಜಿಪ್ಟ್ ಆಯ್ತು ಈಗ ಮಂಗಳೂರಿಗೆ ಬಂದ ಟರ್ಕಿ ಈರುಳ್ಳಿ ಆದರೂ ಬೆಲೆ ಇಳಿದಿಲ್ಲ..!
ಈಜಿಪ್ಟ್ ಆಯ್ತು ಈಗ ಮಂಗಳೂರಿಗೆ ಬಂದ ಟರ್ಕಿ ಈರುಳ್ಳಿ ಆದರೂ ಬೆಲೆ ಇಳಿದಿಲ್ಲ..!
ಮಂಗಳೂರು ಡಿಸೆಂಬರ್ 4: ಮಂಗಳೂರು ಮಾರುಕಟ್ಟೆಗೆ ಈಜಿಪ್ಟ್ ಈರುಳ್ಳಿ ಬಂದ ನಂತರ ಈಗ ಮೊದಲ ಬಾರಿಗೆ ಟರ್ಕಿಯಿಂದ ಈರುಳ್ಳಿ ಆಮದಾಗಿದೆ. ಶತಕದ ಸುತ್ತ ಸುತ್ತುತ್ತಿರುವ ಈರುಳ್ಳಿ ಬೆಲೆ ಟರ್ಕಿಯಿಂದ ಈರುಳ್ಳಿ ಬಂದರೂ ಕೂಡ ಮತ್ತೆ ಬೆಲೆ ಮತ್ತೆ ಏರಿಕೆಯಾಗಿದೆ.
ಮಾರುಕಟ್ಟೆ ಮೂಲಗಳಪ್ರಕಾರ ಮಂಗಳೂರು ಬಂದರು ಮಾರುಕಟ್ಟೆ ಪ್ರದೇಶಕ್ಕೇ 50 ಟನ್‌ನಷ್ಟು ಟರ್ಕಿ ಈರುಳ್ಳಿ ತಲುಪಿದೆ. ಇದರ ದರ ಬೆಳಿಗ್ಗಿನ ಹೊತ್ತು ಕೆಜಿಗೆ 120 ರೂಪಾಯಿ ಇತ್ತು, ಆದರೆ ಮಧ್ಯಾಹ್ನದ ವೇಳೆಗೆ 130 ಆಗಿದ್ದು, 150 ರವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಂಗಳೂರು ಮಾರುಕಟ್ಟೆಗೆ ಹುಬ್ಬಳ್ಳಿ, ಪೂನಾ, ಇಂದೋರ್‌ನಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಪೂರೈಕೆ ಕೊರತೆ, ಗುಣಮಟ್ಟ ಕುಸಿತ ಬಳಿಕ ಈಜಿಪ್ಟ್‌ನಿಂದ ಈರುಳ್ಳಿ ಮಂಗಳೂರು ಮಾರುಕಟ್ಟೆ ತಲುಪಿತ್ತು. ಈಜಿಪ್ಟ್ ಈರುಳ್ಳಿ ಗುಣಮಟ್ಟವೂ ತೃಪ್ತಿಕರ ಕಂಡುಬಂದಿರದ ಹಿನ್ನೆಲೆಯಲ್ಲಿ ಮಂಗಳೂರು ಮಾರುಕಟ್ಟೆ ಅಂತಿಮವಾಗಿ ಟರ್ಕಿ ಈರುಳ್ಳಿ ಬಂದಿದೆ.
ಟರ್ಕಿ ಇರುಳ್ಳಿ ಗಾತ್ರ ಸೇಬುವಿನ ಹಾಗೆ ಇದ್ದು 2 ರಿಂದ 3 ಈರುಳ್ಳಿ ಇಟ್ಟರೂ ಒಂದು ಕೆಜಿಯಾಗುತ್ತದೆ. ಒಂದು ಈರುಳ್ಳಿ 400 ರಿಂದ 600 ಗ್ರಾಮ ತೂಕವಿದೆ.
ಈ ನಡುವೆ ಕರಾವಳಿ ಹೊಟೇಲ್ ಗಳಲ್ಲಿ ಈರುಳ್ಳಿ ಬಳಕೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಹೋಟೆಲ್‌ಗಳಲ್ಲಿ ಈರುಳ್ಳಿ ಬಜೆ, ಆನಿಯನ್ ಉತ್ತಪ್ಪದಂತಹ ತಿಂಡಿಗಳನ್ನು ತಯಾರಿಸುವುದನ್ನೇ ಬಿಟ್ಟಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ತಿಂಡಿಯಲ್ಲಿ ಈರುಳ್ಳಿ ಬದಲು ಪರ್ಯಾಯವಾಗಿ ಕ್ಯಾಬೇಜ್ ಬಳಸುತ್ತಿದ್ದಾರೆ.