DAKSHINA KANNADA
ತುಳುವೆರೆ ಕೂಡ್‌ಕಟ್ಟ್-ತುಳು ನಾಡ ಐಸಿರ-೨೦೨೧ ಭಾಷಾ ಸಾಮರಸ್ಯವೇ ಇಲ್ಲಿನ ಜನರ ಒಗ್ಗಟ್ಟಿನ ಸಂಕೇತ -ಒಡಿಯೂರು ಸ್ವಾಮೀಜಿ.
ಪುತ್ತೂರು : ಭಾಷೆ ಉಳಿದಾಗ ಸಂಸ್ಕೃತಿಯ ಉಳಿವು ಸಾಧ್ಯವಾಗಿದ್ದು, ಭಾಷೆ ಅಳಿದಲ್ಲಿ ಅಲ್ಲಿನ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ತುಳುನಾಡಿನಲ್ಲಿ ಹಲವು ಭಾಷೆಗಳ ಸಮ್ಮಿಲನವಿದ್ದು, ಭಾಷಾ ಸಾಮರಸ್ಯವೇ ಇಲ್ಲಿನ ಜನರ ಒಗ್ಗಟ್ಟಿನ ಸಂಕೇತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಷಷ್ಠ್ಯಬ್ಧ ಸಂಭ್ರಮ ಸಮಿತಿ ಪುತ್ತೂರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇವುಗಳ ಸಹಯೋಗದಲ್ಲಿ ಸೋಮವಾರ ಪುತ್ತೂರಿನ ಬಂಟರ ಭವನದಲ್ಲಿ ನಡೆದ `ತುಳುವೆರೆ ಕೂಡ್‌ಕಟ್ಟ್-ತುಳು ನಾಡ ಐಸಿರ-೨೦೨೧’ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಕನ್ನಡ ಮತ್ತು ತುಳು ಭಾಷೆಯು ಪರಸ್ಪರ ಜೊತೆಯಾಗಿದ್ದು, ಇಲ್ಲಿನ ಮಾತ್ರ್ ಭಾಷೆಯ ಹೆಮ್ಮೆ ಮಹತ್ವದ್ದಾಗಿದೆ. ಭಾಷಾ ಆವಿಷ್ಕಾರ ಅಲ್ಲಲ್ಲಿ ನಡೆಯುತ್ತಿರುವುದು ಸಹಜವಾಗಿದೆ. ಸಂಘಟಿತ ಪ್ರಯತ್ನಗಳಿಂದ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ. ತುಳು ಭಾಷೆಯು ತನ್ನದೇ ಆಗಿರುವ ಲಿಪಿಯನ್ನು ಹೊಂದಿದ್ದು, ತುಳು ಲಿಪಿಯು ವಿಕಸನಗೊಂಡು ಮಲಯಾಳಂ ಲಿಪಿಯಾಗಿದೆ. ತುಳುವರ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇನ್ನೂ ತುಳು ಭಾಷೆ ೮ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಿಲ್ಲ. ನಮ್ಮಲ್ಲಿ ಇಚ್ಚಾಶಕ್ತಿಯೊಂದಿಗೆ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಒಟ್ಟಾದಲ್ಲಿ ಅತಿಶೀಘ್ರದಲ್ಲಿ ತುಳು ಭಾಷೆಯು ೮ನೇ ಪರಿಚ್ಚೇದಕ್ಕೆ ಸೇರಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗಳು ಸೇರಿದಾಗ ದೇಶವಾಗುತ್ತದೆ. ನಮ್ಮದು ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿಯ ಮಿಳಿತವಾಗಿದ್ದು, ಪ್ರತಿಯೊಂದು ದೇಶಗಳು ತಮ್ಮ ಸಂಸ್ಕೃತಿಯ ಮೂಲಕ ಗುರುತಿಸ್ಪಡುತ್ತದೆ. ಭಾರತವು ತನ್ನ ಆಧ್ಯಾತಿಕತೆಯ ಮೂಲಕ ವಿಶ್ವದೆಲ್ಲೆಡೆ ಗುರುತಿಸಲ್ಪಡುತ್ತಿದೆ. ಇಲ್ಲಿನ ಗುರು ಪರಂಪರೆಯಿಂದಾಗಿ ದೇಶವು ಜಗದ್ಗುರುವಾಗಿದೆ. ಭಾಷೆಗೆ ಜಾತಿ ಮತದ ಅಂತರವಿಲ್ಲ. ಅಮೇರಿಕಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ತುಳು ಸಮ್ಮೇಳನ, ತುಳು ಕೂಟಗಳನ್ನು ಹಮ್ಮಿಕೊಳ್ಳುತ್ತಿರುವ ತುಳುವರು ಭಾಷಾ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಒಡಿಯೂರು ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಚಿಕ್ಕಪ್ಪ ನಾಯಕ್ ಅರಿಯಡ್ಕ, ಜಯವರ್ಮ ಜೈನ್ ನೂಜಿಬಾಳ್ತಿಲ, ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ರಾಜೇಂದ್ರ ಕೋಡಿಂಬಾಡಿ, ಯಡ್ತೂರು ರಾಜೀವ ಶೆಟ್ಟಿ, ಚಂದ್ರಹಾಸ ರೈ ಮಾಡಾವು, ಡಾ. ರಘು ಬೆಳ್ಳಿಪ್ಪಾಡಿ, ಇಸ್ಮಾಯಿಲ್ ಕೆಲಿಂಜ ಮತ್ತು ನೇಮು ಪರವ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ಅವರ ನೇತೃತ್ವದಲ್ಲಿ ಕುಣಿತ ಭಜನೆ ನಡೆಯಿತು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ,.ಒಡಿಯೂರು ಶ್ರೀ ಷಷ್ಠ್ಯಬ್ಧ ಸಂಭ್ರಮ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು,ವಕೀಲರಾಧಾ ಮಹೇಶ್ ಕಜೆ,ಅತಿಥಿಗಳಾಗಿ ಭಾಗವಹಿಸಿದ್ದ ಒಡಿಯೂರು ಶ್ರೀ ಷಷ್ಠ್ಯಬ್ಧ ಸಂಭ್ರಮ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣಭಟ್, ಸುಧಾನ ವಿದ್ಯಾಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಾರ್ಯದರ್ಶಿ ಹರೀಣಾಕ್ಷಿ ಜೆ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಬನ್ನೂರು, ನಯನ ರೈ. ಒಡಿಯೂರು ಶ್ರೀ ಷಷ್ಠ್ಯಬ್ಧ ಸಂಭ್ರಮ ಕೇಂದ್ರ ಸಮಿತಿ ಸದಸ್ಯ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.