LATEST NEWS
ದೈವಾರಾಧನೆಯನ್ನು ಬ್ಯುಸಿನೆಸ್ ಮಾಡಿಕೊಂಡ ಟ್ರಾವೆಲ್ ಏಜೆನ್ಸಿ…!!
ಮಂಗಳೂರು ಡಿಸೆಂಬರ್ 02: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನೆಮಾ ಬಂದು ಇಡೀ ಜಗತ್ತಿಗೆ ಕರಾವಳಿಯ ದೈವಾರಾಧನೆ ಬಗ್ಗೆ ಪರಿಚಯವಾಗಿತ್ತು, ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಟ್ರಾವೆಲ್ ಏಜೆನ್ಸಿಯೊಂದು ಬ್ಯುಸಿನೆಸ್ ಗೆ ಇಳಿದಿದ್ದು, ದೈವಕೋಲ, ಕಂಬಳದ ಹೆಸರಲ್ಲಿ ಟೂರ್ ಪ್ಯಾಕೇಜ್ ಘೋಷಿಸಿದೆ.
ಟ್ರಾವೆಲ್ ಸಂಸ್ಥೆಯೊಂದು ದೈವಾರಾಧನೆಯ ಚಿತ್ರವೊಂದನ್ನು ಹಾಕಿ ಒಬ್ಬ ವ್ಯಕ್ತಿಗೆ 2899ರೂ. ಮೌಲ್ಯದ ಪ್ಯಾಕೇಜ್‌ವೊಂದನ್ನು ಘೋಷಣೆ ಮಾಡಿದೆ. 2024ರ ಫೆ.10 ಮತ್ತು 11ರಂದು ಈ ಪ್ಯಾಕೇಜ್‌ಗೆ ದಿನವನ್ನು ಘೋಷಣೆ ಮಾಡಲಾಗಿದೆ. ಈ ಪ್ಯಾಕೇಜ್‌ನಲ್ಲಿ ನದಿಯಲ್ಲಿ ಬೋಟಿಂಗ್, ಉಪ್ಪಿನಂಗಡಿ ಕಂಬಳ ವೀಕ್ಷಣೆ, ಬೊಳ್ಳಾಡಿ ಫಾರ್ಮ್ನನಲ್ಲಿ ಪಾರ್ಟಿ, ಬೊಳ್ಳಾಡಿ ಮನೆಯಲ್ಲಿ ಭೂತ ಕೋಲ, ಬೀರಮಲೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಪ್ರವಾಸ ಎಂದು ನಮೂದಿಸಲಾಗಿದೆ. ದೈವಕೋಲದ ವೀಕ್ಷಣೆಗೆ ಟೂರ್ ಪ್ಯಾಕೇಜ್ ಆಫರ್ ‘ಭೂತ ಕೋಲ’ A night with ancient spirits ಹೆಸರಿನಲ್ಲಿ ಆಫರ್ ನೀಡುವ ಮೂಲಕ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ.
ದೈವಕೋಲದ ಫೋಟೋವನ್ನು ಟೂರ್ ಪ್ಯಾಕೇಜ್‌ನಲ್ಲಿ ಬಳಸಿ ಪ್ರಚಾರ ಮಾಡಿದ್ದಲ್ಲದೆ, ಧಾರ್ಮಿಕ ನಂಬಿಕೆಯನ್ನೇ ವ್ಯವಹಾರ ಮಾಡಲು ಹೊರಟ ಟೂರ್ ಏಜೆನ್ಸಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು, ಮುಂಬಯಿ ಸೇರಿದಂತೆ ನಾನಾ ಕಡೆ ವ್ಯಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಈ ಟೂರ್ ಪ್ಯಾಕೇಜ್ ಹರಿದಾಡುತ್ತಿದ್ದು, ಹಲವರು ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿ ಗರು ಕೂಡಲೇ ಈ ಪ್ಯಾಕೇಜನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ದೈವವನ್ನು ದೈವದ ರೀತಿಯಲ್ಲಿ ಆರಾಧನೆ ಮಾಡಬೇಕೆ ಹೊರತು ಅದು ಹಾದಿ ತಪ್ಪಿದರೆ ಹೀಗೆ ಆಗುವುದು ಎಂದು ಆಕ್ರೋಶ ವ್ಯಕ್ತವಾಗಿದೆ. ಒಂದು ವೇಳೆ ಪ್ಯಾಕೇಜ್ ಘೋಷಿಸಿದ ಟ್ರಾವಲ್ ಸಂಸ್ಥೆ ಈ ಪ್ಯಾಕೇಜ್ ಮುಂದುವರಿಸಿದರೆ ಅದಕ್ಕೆ ತಕ್ಕುದಾದ ಕ್ರಮವನ್ನು ದೈವಾರಾಧಕರು ತೆಗೆದುಕೊಳ್ಳಲಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.