LATEST NEWS
ಕಾನೂನು ಬಾಹಿರವಾಗಿ ಅಧಿಕಾರಿಗಳ ವರ್ಗಾವಣೆ – ಪ್ರಕಾಶ್ ಜಾವ್ಡೇಕರ್

ಕಾನೂನು ಬಾಹಿರವಾಗಿ ಅಧಿಕಾರಿಗಳ ವರ್ಗಾವಣೆ – ಪ್ರಕಾಶ್ ಜಾವ್ಡೇಕರ್
ಉಡುಪಿ ಜನವರಿ 23: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಎಸ್ಪಿ ಅಕ್ರಮ ಮರಳುಗಾರಿಕೆ ಮಟ್ಟ ಹಾಕಿದ ಕಾರಣಕ್ಕೆ ಎಸ್ಪಿಯನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ ಎಂದು ಆರೋಪಿಸಿದರು. ಹಾಸನ ಜಿಲ್ಲಾಧಿಕಾರಿ ಅವರನ್ನು ಕೂಡ ಅನಗತ್ಯವಾಗಿ ವರ್ಗಾವಣೆ ಮಾಡಲಾಗಿದ್ದು ಈ ರೀತಿಯಾಗಿ ಅಧಿಕಾರಿಗಳ ವರ್ಗಾವಣೆ ಕಾನೂನು ಬಾಹಿರ ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನ ಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡಬಾರದು ಎಂದು ಚುನಾವಣಾ ಆಯೋಗ ತಾಕೀತು ಮಾಡಿದೆ. ಆದರೆ ರಾಜ್ಯ ಸರಕಾರ ಚುನಾವಣಾ ಆಯೋಗದ ಆದೇಶಕ್ಕೂ ಕ್ಯಾರೆ ಅನ್ನದೇ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.

ರಾಜ್ಯ ಮುಖ್ಯಮಂತ್ರಿ ಉಡುಪಿಗೆ ಹಲವು ಸಲ ಭೇಟಿ ನೀಡಿದ್ದರೂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಆದರೆ ಈಗ ಕಾಂಗ್ರೇಸ್ ಅಧ್ಯಕ್ಷ ಈಗ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡುತ್ತಾರಂತೆ, ಜನರಿಗೆ ಭಕ್ತಿಗೂ ರಾಜಕೀಯಕ್ಕೂ ವ್ಯತ್ಯಾಸ ಗೊತ್ತು, ನಿಜಭಕ್ತರು ಯಾರು ಅಂತ ದೇವರಿಗೂ ಚೆನ್ನಾಗಿ ಗೊತ್ತು ಎಂದು ಹೇಳಿದರು. ಗುಜರಾತ್ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಟೆಂಪಲ್ ರನ್ ಮಾಡಿದರು ಆದರೆ ಅದು ಕೈ ಹಿಡಿಯಲಿಲ್ಲ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೂ ಹಿಂದೂ ಅಂತಾರೆ, ಚುನಾವಣೆ ಬಂದಾಗ ಇವರಿಗೂ ದೇವಾಲಯ ನೆನಪಾಗುತ್ತೆ ಎಂದು ವ್ಯಂಗ್ಯವಾಡಿದರು.
ಮಹದಾಯಿಗಾಗಿ ಕರ್ನಾಟಕ ಬಂದ್ ಮಾಡುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ಜಾವ್ಡೇಕರ್ ಮಹಾದಾಯಿ ವಿಚಾರ ವಿವಾದ ನ್ಯಾಯಾಲಯದಲ್ಲಿದೆ, ಹಿಂದೆ ಯುಪಿಎ ಸರ್ಕಾರ ಕೋರ್ಟ್ ಗೆ ಹೋಗಿತ್ತು, ಅಧಿಕಾರದಲ್ಲಿದ್ದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತುಟಿಪಿಟಕ್ ಅಂದಿಲ್ಲ, ಈಗ ಕರ್ನಾಟಕಕ್ಕೆ ಕುಡಿಯುವ ನೀರು ಕೊಡ್ತೇನೆ ಎಂದು ಗೋವಾ ಮುಖ್ಯಮಂತ್ರಿ ಹೇಳಿದರೂ ಅವರಿಗೆ ವಂದನೆ ಹೇಳುವ ಬದಲು ಕರ್ನಾಟಕ ಬಂದ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಈ ಕರ್ನಾಟಕ ಬಂದ್ ನ ಹಿಂದೆ ಯಾರಿದ್ದಾರೆ ನಮಗೆ ಗೊತ್ತು ಎಂದು ಹೇಳಿದರು . ರಾಜ್ಯ ಕಾಂಗ್ರೇಸ್ ನಾಯಕರು ಗೋವಾ ವಿಪಕ್ಷ ನಾಯಕರ ಮನವೊಲಿಸಿ, ಬಿಜೆಪಿಯ ನಾವು ಪಾರಿಕ್ಕರ್ ಮನವೊಲಿಸ್ತೇವೆ ಎಂದು ಹೇಳಿದರು.