DAKSHINA KANNADA
ರೈಲಿನಲ್ಲಿ ಹೃದಯಾಘಾತದಿಂದ ನಿಧನರಾದ ವಕೀಲ ಕೆ.ಪಿ. ಜೇಮ್ಸ್

ಪುತ್ತೂರು ಪೆಬ್ರವರಿ 17 : ರೈಲಿನಲ್ಲಿ ಸಂಚರಿಸುತ್ತಿರುವ ಸಂದರ್ಭ ಹೃದಯಾಘಾತದಿಂದ ವಕೀಲರೊಬ್ಬರು ಸಾವನಪ್ಪಿರುವ ಘಟನೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ,
ಪುತ್ತೂರಿನ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ, ವಕೀಲ ಕೆ.ಪಿ. ಜೇಮ್ಸ್ ಅವರು ತಮಿಳುನಾಡು ಕಡೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆ.ಪಿ.ಜೇಮ್ಸ್ ಅವರು ಪತ್ನಿಯೊಂದಿಗೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲಿದ್ದ ಅವರು ರಾತ್ರಿ ವೇಳೆ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು. ಜೇಮ್ಸ್ ವಾಪಸ್ ಬರದ ಕಾರಣ ಅವರ ಪತ್ನಿ ಹುಡುಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ಕಿರುಚಾಡಿದ್ದಾರೆ.

ವ್ಯಕ್ತಿಯೊಬ್ಬರು ರೈಲಿನಿಂದ ಕೆಳಗೆ ಬಿದ್ದಿರುವ ವಿಚಾರವನ್ನು ರೈಲಿನಲ್ಲಿದ್ದ ಪ್ರಯಾಣಿಕರು ಅವರ ಗಮನಕ್ಕೆ ತಂದರು. ಈ ಮಧ್ಯೆ ತಲ್ವೇರಿ ಬಳಿಯ ಧರ್ಮಡಮ್ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಜೇಬಿನಲ್ಲಿ ಗುರುತುಚೀಟಿ ಮತ್ತು ಭಾವಚಿತ್ರ ಆಧರಿಸಿ ಅದು ಕೆ.ಪಿ. ಜೇಮ್ಸ್ ಅವರದ್ದು ಎಂದು ಶಂಕಿಸಲಾಗಿತ್ತು. ಬಳಿಕ ಸಂಬಂಧಿಕರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ. ಕೆ.ಪಿ. ಜೇಮ್ಸ್ ದಂಪತಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಚೆಂಗಣ್ಣೂರಿಗೆ ತೆರಳುತ್ತಿದ್ದ ಲಾವತ್ತಡ್ಕದ ಅಬ್ರಾಹಂ ತೋಮಸ್ ಎಂಬುವರು ಇದ್ದರು. ರಾತ್ರಿ ವೇಳೆ ಮಹಿಳೆ ಕಿರುಚಾಡಿದ್ದನ್ನು ಗಮನಿಸಿದ ಅವರು ವಿಚಾರಿಸಿದ ವೇಳೆ ಪುತ್ತೂರಿನವರೆಂದು ಗೊತ್ತಾಗಿದೆ. ಬಳಿಕ ಅವರು ಕೊಝಿಕ್ಕೊಡ್ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ಜೇಮ್ಸ್ ಅವರ ಪತ್ನಿಯನ್ನು ರೈಲಿನಿಂದ ಇಳಿಸಿ ಅವರ ಸಂಬಂಧಿಕರ ಮನೆಗೆ ಕಳುಹಿಸಿದ್ದರು