KARNATAKA
ಕಣ್ಣೂರು – ಬೆಂಗಳೂರು ಎಕ್ಸಪ್ರೆಸ್ ರೈಲಿನ ಮೇಲೆ ಉರುಳಿದ ಬಂಡೆಗಳು….!!

ಬೆಂಗಳೂರು ನವೆಂಬರ್ 12: ಸಂಚರಿಸುತ್ತಿರುವಾಗಲೇ ರೈಲಿನ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಐದು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿವೆ.
ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ತೊಪ್ಪೂರು–ಸಿವಾಡಿ ಮಧ್ಯೆ ಮುಂಜಾನೆ 3.50 ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಸಂಚರಿಸುತ್ತಿದ್ದಾಗಲೇ ರೈಲಿನ ಮೇಲೆ ಬಂಡೆಗಳು ಉರುಳಿದ್ದು, ರೈಲು ಹಳಿ ತಪ್ಪಿದೆ. ರೈಲಿನ 5 ಕೋಚ್ ಗಳು ಹಳಿತಪ್ಪಿದ್ದು,

ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಹೇಳಿಕೆ ನೀಡಿದೆ. ಪ್ರಯಾಣಿಕರನ್ನು ಬಸ್ ಮೂಲಕ ತಮ್ಮ ಊರಿಗೆ ಕಳುಹಿಸಲಾಗುತ್ತಿದೆ. ಪ್ರಯಾಣಿಕರಿಗೆ ತಿಂಡಿ ಹಾಗೂ ನೀರಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿದೆ.
ಈಗಾಗಲೇ ಹಳಿ ತಪ್ಪಿದ ರೈಲಿನ ದುರಸ್ಥಿ ಕಾರ್ಯ ಮುಂದುವರೆದಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ.