LATEST NEWS
ಟೊಯಿಂಗ್ ಸಿಬ್ಬಂದಿಯ ಅಹಂಕಾರ – ಬಾಲಕನ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೋಲಿಸರು
ಮಂಗಳೂರು : ನಗರದಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಇದ್ದಾಗಲೇ ಟೋಯಿಂಗ್ ಮಾಡಿ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಹೊತ್ತೊಯ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಮತ್ತು ಚಾಲಕನ ಜತೆ ನಗರಕ್ಕೆ ಶಾಪಿಂಗ್‌ಗೆ ಬಂದಿದ್ದರು. ಈ ಸಂದರ್ಭ ಮಹಿಳೆಯ 7 ವರ್ಷದ ಮಗ ಮಲಗಿದ್ದ ಕಾರಣ ಅವನನ್ನು ಚಾಲಕನ ಜತೆ ಕಾರಿನಲ್ಲೇ ಬಿಟ್ಟು ಮಹಿಳೆ ಶಾಪಿಂಗ್‌ಗೆ ತೆರಳಿದ್ದರು. ಮಹಿಳೆ ಮೊಬೈಲ್ ಬಿಟ್ಟು ಹೋಗಿದ್ದು, ಕೊಡಲೆಂದು ಚಾಲಕ ಕಾರನ್ನು ಲಾಕ್ ಮಾಡಿ ಹೋಗಿದ್ದರು. ಈ ವೇಳೆ ಪೊಲೀಸರ ಟೋಯಿಂಗ್ ವಾಹನ ಅದೇ ದಾರಿಯಲ್ಲಿ ಬಂದಿದ್ದು, ಕಾರನ್ನು ತೆರವು ಮಾಡುವಂತೆ ಘೋಷಣೆ ಮಾಡಿದ್ದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಕಾರಿನ ಗಾಜಿಗೆ ಟಿಂಟ್ ಇದ್ದ ಕಾರಣ ಒಳಗೆ ಬಾಲಕ ಇರುವುದು ಗೊತ್ತಾಗದೆ ಟೋಯಿಂಗ್ ನಿರ್ವಾಹಕರು ಕಾರನ್ನು ಟೋಯಿಂಗ್ ಮಾಡಿದ್ದಾರೆ.
ಮಹಿಳೆ ಶಾಪಿಂಗ್ ಮುಗಿಸಿ ಬಂದಾಗ ಬಾಲಕನ ಸಹಿತ ಕಾರು ನಾಪತ್ತೆಯಾಗಿತ್ತು. ಚಾಲಕನಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಕಾರನ್ನು ಟೋಯಿಂಗ್ ಮಾಡಿರುವುದನ್ನು ಸ್ಥಳೀಯ ಅಂಗಡಿಯವರು ತಿಳಿಸಿದರು. ತಕ್ಷಣ ಕದ್ರಿ ಠಾಣೆಗೆ ತೆರಳಿ ವಿಷಯ ತಿಳಿಸಿದಾಗ ಸ್ವತಃ ಪೊಲೀಸರಿಗೂ ಗಾಬರಿಯಾಗಿದೆ. ಪರಿಶೀಲಿಸಿದಾಗ ಬಾಲಕ ಕಾರಿನಲ್ಲಿ ಮಲಗಿದ ಸ್ಥಿತಿಯಲ್ಲೇ ಇತ್ತು. ಕದ್ರಿಯ ಗಿರಿಯಾಸ್ ಸಮೀಪ ಕಾರನ್ನು ಪಾರ್ಕಿಂಗ್ ಮಾಡಿದ್ದರು. ಮಾಹಿತಿಯ ಪ್ರಕಾರ ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿ ಇರಲಿಲ್ಲ ,ಅದು ರಸ್ತೆ ಕೂಡ ಆಗಿರಲಿಲ್ಲ ,ನೋ ಪಾರ್ಕಿಂಗ್ ಸ್ಥಳದಲ್ಲಿ ಇದ್ದರೆ ಹೊತ್ತೊಯ್ಯುವ ಕಾರಣ ನೋ ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸಿದ್ದೆವು ಎಂದು ಮಗವಿನ ತಾಯಿ ದಿವ್ಯ ತಿಳಿಸಿದ್ದಾರೆ.